ಹೈದರಾಬಾದ್:ಪಂಚರಾಜ್ಯಗಳ ವಿಧಾನಸಭೆಯ 475 ಕ್ಷೇತ್ರಳಿಗೆ ಇಂದು ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಿತು. ತಮಿಳುನಾಡು, ಕೇರಳ ಹಾಗೂ ಪುದುಚೇರಿಯ ಎಲ್ಲ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನವಾಗಿದ್ದು, ಪಶ್ಚಿಮ ಬಂಗಾಳ ಹಾಗೂ ಅಸ್ಸೋಂನಲ್ಲಿ ಮೂರನೇ ಹಂತದ ವೋಟಿಂಗ್ ನಡೆಯಿತು.
ಯಾವ ರಾಜ್ಯದಲ್ಲಿ ಎಷ್ಟು ಮತದಾನ!?
ಸಂಜೆ 7 ಗಂಟೆವರೆಗಿನ ಮಾಹಿತಿ ಪ್ರಕಾರ ಅಸ್ಸೋಂನಲ್ಲಿಶೇ. 82.33,ಕೇರಳದಲ್ಲಿ ಶೇ. 70.29. ತಮಿಳುನಾಡು ಶೇ.65.19, ಪಶ್ಚಿಮ ಬಂಗಾಳದಲ್ಲಿ ಶೇ.78 ಹಾಗೂ ಪುದುಚೆರಿಯಲ್ಲಿ ಶೇ. 78.90ರಷ್ಟು ವೋಟಿಂಗ್ ಆಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.
- ತಮಿಳುನಾಡು: 234 ಕ್ಷೇತ್ರಗಳು, 3,998 ಅಭ್ಯರ್ಥಿಗಳು, 6.28 ಕೋಟಿ ಮತದಾರರು
- ಪುದುಚೇರಿ: 30 ಕ್ಷೇತ್ರಗಳು, 324 ಅಭ್ಯರ್ಥಿಗಳು, 10.03 ಲಕ್ಷ ಮತದಾರರು
- ಪಶ್ಚಿಮ ಬಂಗಾಳ: 31 ಕ್ಷೇತ್ರಗಳು, 205 ಅಭ್ಯರ್ಥಿಗಳು, 75.8 ಲಕ್ಷ ಮತದಾರರು
- ಅಸ್ಸೋಂ: 40 ಕ್ಷೇತ್ರಗಳು, 337 ಅಭ್ಯರ್ಥಿಗಳು, 79.19 ಲಕ್ಷ ಮತದಾರರು ಇದ್ದರು.
- ಕೇರಳದಲ್ಲಿ 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ
ಪ್ರಮುಖವಾಗಿ ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನಿರ್ ಸೇಲ್ವಂ, ಡಿಎಂಕೆ ನಾಯಕ ಸ್ಟಾಲಿನ್, ಬಿಜೆಪಿ ಖುಷ್ಬೂ, ಅಣ್ಣಾಮಲೈ, ಮಕ್ಕಳ್ ನಿಧಿ ಪಕ್ಷದ ಕಮಲ್ಹಾಸನ್ ಪ್ರಮುಖರಾಗಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಆಡಳಿತರೂಢ ಪಕ್ಷ ಎಐಎಡಿಎಂಕೆ ನಡುವೆ ನೇರ ಸ್ಪರ್ಧೆ ಉಂಟಾಗಿದ್ದು, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಮೊದಲ ಸಲ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಭಾರತೀಯ ಜನತಾ ಪಾರ್ಟಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಕೇರಳದಲ್ಲಿ ಮೆಟ್ರೋಮ್ಯಾನ್ ಇ. ಶ್ರೀಧರನ್ ನೇತೃತ್ವದಲ್ಲಿ ಬಿಜೆಪಿ, ಎಲ್ಡಿಎಫ್ ಹಾಗೂ ಯುಡಿಎಫ್ ನಡುವೆ ನೇರ ಸ್ಪರ್ಧೆ ಇದೆ. ಪುದುಚೇರಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಅಸ್ಸೋಂನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಮಿತ್ರ ಪಕ್ಷ ಯುಪಿಪಿಎಲ್ ನಡುವೆ ಸ್ಪರ್ಧೆ ಇದೆ.