ನವದೆಹಲಿ:ನಿಮ್ಮ ಮಕ್ಕಳಿಗೆ ಮನೆಯಲ್ಲಿ ಕುರಾನ್ ಹೇಳಿಕೊಡಿ, ಮದರಸಾದಲ್ಲಿ ಅಲ್ಲ. ನಿಮ್ಮ ಮಕ್ಕಳು ವೈದ್ಯರು, ಇಂಜಿನಿಯರ್ ಆಗಬೇಕಾದರೆ ಮದರಸಾಗಳಿಗೆ ಕಳುಹಿಸಿಕೊಡಬೇಡಿ ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.
ದೆಹಲಿಯಲ್ಲಿ ಆಯೋಜಿಸಲಾಗಿದ್ದ ಪಾಂಚಜನ್ಯ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲರಿಗೂ ಶಾಲೆಗಳಲ್ಲಿ ಸಾಮಾನ್ಯ ಶಿಕ್ಷಣ ನೀಡಬೇಕು. ಆಗ ಮಾತ್ರ ಎಲ್ಲ ವರ್ಗದ ಜನರು ಅಭಿವೃದ್ಧಿ ಕಾಣಲು ಸಾಧ್ಯ. ಮದರಸಾಗಳು ಇರುವವರೆಗೂ ನಿಮ್ಮ ಮಕ್ಕಳು ವೈದ್ಯರು ಮತ್ತು ಎಂಜಿನಿಯರ್ ಆಗುವ ಬಗ್ಗೆ ಯೋಚಿಸಲು ಸಾಧ್ಯವಾಗುವುದಿಲ್ಲ. ಮದರಸಾಗಳಲ್ಲಿ ಓದಿದರೆ ಡಾಕ್ಟರ್, ಇಂಜಿನಿಯರ್ ಆಗುವುದಿಲ್ಲ ಎಂದು ಮಕ್ಕಳಿಗೆ ಹೇಳಿದರೆ ಅವರೇ ಹೋಗಲು ನಿರಾಕರಿಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಕುರಾನ್ ಅನ್ನು ನಿಮ್ಮ ಮಕ್ಕಳಿಗೆ ಕಲಿಸಿಕೊಡಿ, ಆದರೆ ಮನೆಯಲ್ಲಿ. ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸಿ ಮಕ್ಕಳನ್ನು ಮದರಸಾಗಳಿಗೆ ಸೇರಿಸಲಾಗುತ್ತಿದೆ. ವಿಜ್ಞಾನ, ಗಣಿತ, ಜೀವಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರದ ಬಗ್ಗೆಯೂ ಮಕ್ಕಳಿಗೆ ಶಿಕ್ಷಣ ಸಿಗಬೇಕು. ಶಾಲೆಗಳಲ್ಲಿ ಸಾಮಾನ್ಯ ಶಿಕ್ಷಣ ಇರಬೇಕು. ಧಾರ್ಮಿಕ ಪಠ್ಯಗಳನ್ನು ಮನೆಯಲ್ಲಿ ಕಲಿಸಬಹುದು ಎಂದು ಹೇಳಿದ್ದಾರೆ.
ಹೈದರಾಬಾದ್ ಮೌಲಾನಾ ಆಜಾದ್ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಶರ್ಮಾ, ಅಸ್ಸೋಂನಲ್ಲಿ ಎಲ್ಲ ಮದರಸಾಗಳನ್ನು ವಿಸರ್ಜಿಸಿ ಸಾಮಾನ್ಯ ಶಾಲೆಗಳನ್ನಾಗಿ ಪರಿವರ್ತಿಸಲಾಗಿದೆ. ಸರ್ಕಾರದ ಈ ನಿರ್ಧಾರ ಶ್ಲಾಘನೀಯ ಎಂದರು.
ಓದಿ:ಗೋವಾದಲ್ಲಿ ಪೋರ್ಚುಗೀಸ್ ದಾಳಿಯಿಂದ ಹಾಳಾದ ದೇವಾಲಯಗಳ ಪುನರ್ನಿರ್ಮಾಣ: ಸಿಎಂ ಸಾವಂತ್