ನಾಗಾಂವ್ (ಅಸ್ಸೋಂ): ಅಸ್ಸೋಂನಲ್ಲಿ ಇತ್ತೀಚೆಗೆ ಆದ ಅಲ್ಲಿನ ಪೊಲೀಸ್ ಇಲಾಖೆಯಲ್ಲಿ 'ಲೇಡಿ ಸಿಂಗಂ' ಎಂದೇ ಜನಪ್ರಿಯರಾಗಿದ್ದ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ಜುನ್ಮೋನಿ ರಾಭಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇವರ ಸಾವನ್ನು ಕೊಲೆ ಎಂದು ಅನುಮಾನಿಸಲಾಗಿತ್ತು. ಈ ಹಿನ್ನಲೆಯಲ್ಲಿ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿದೆ.
ಈ ಬಗ್ಗೆ ಇಂದು (ಶನಿವಾರ) ಪತ್ರಿಕಾಗೋಷ್ಠಿ ನಡೆಸಿದ ಡಿಜಿಪಿ ಜಿಪಿ ಸಿಂಗ್, "ಸಾರ್ವಜನಿಕ ಬೇಡಿಕೆಯಿಂದಾಗಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದೆ. ನಾನು ಘಟನೆಯ ವಿವರಗಳನ್ನು ಪರಿಶೀಲಿಸಿದ್ದೇನೆ ಮತ್ತು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಅಸ್ಸೋಂ ಸರ್ಕಾರಕ್ಕೆ ಮನವಿ ಮಾಡಿದ್ದೇನೆ"ಎಂದು ಹೇಳಿದ್ದಾರೆ.
ಇದರ ಜೊತೆಗೆ ಮಹತ್ವ ಬೆಳವಣಿಗೆ ಎಂದರೆ, ನಾಗಾಂವ್‌ನ ಎಸ್‌ಪಿ ಲೀನಾ ಡೋಲೆ, ಲಖಿಂಪುರದ ಎಸ್‌ಪಿ ಬೇದಂತ ಮಾಧವ್ ರಾಜ್‌ಖೋವಾ ಅವರನ್ನು ಸಹ ವರ್ಗಾಯಿಸಲಾಗಿದೆ. ಈ ಬಗ್ಗೆ ಡಿಜಿಪಿ ಜಿಪಿ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಘಟನೆ ಏನು?: ಮೇ 16 ರಂದು ಬೆಳಗಿನ ಜಾವ 2.30 ರ ಸುಮಾರಿಗೆ ನಾಗಾವ್ ಜಿಲ್ಲೆಯ ಜಖಲಬಂಧ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 'ಲೇಡಿ ಸಿಂಗಂ' ಎಂದು ಕರೆಯಲ್ಪಡುವ ಎಸ್‌ಐ ಜುನ್ಮೋನಿ ರಾಭಾ ಅವರು ಸಾವನ್ನಪ್ಪಿದರು. ಆಕೆಯ ಕಾರು ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಆದರೆ, ಇದು ಅಪಘಾತವಲ್ಲ ಪೂರ್ವ ಯೋಜಿತ ಕೊಲೆ ಎಂದು ಜುನ್ಮೋನಿಯ ತಾಯಿ ಆರೋಪಿಸಿದ್ದರು. ಅಸ್ಸೋಂ ಜನರು, ವಿವಿಧ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಕೂಡ ಘಟನೆಯ ಸಿಬಿಐ ತನಿಖೆಗೆ ಒತ್ತಾಯಿಸಿದರು. ಆರಂಭದಲ್ಲಿ ಈ ಪ್ರಕರಣವನ್ನು ಅಸ್ಸೋಂ ಸಿಐಡಿ ತನಿಖೆ ನಡೆಸುತ್ತಿತ್ತು.
ಮೇ 19 ರಂದು ನಾಗಾವ್ ಮತ್ತು ಲಖೀಂಪುರ ಜಿಲ್ಲೆಯ ನಾಲ್ವರು ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅವರಂದರೆ ಎಎಸ್‌ಪಿ (ಅಪರಾಧ ವಿಭಾಗ) ನಾಗಾಂವ್-ರೂಪಜ್ಯೋತಿ ಕಲಿತಾ, ನಾಗಾಂವ್ ಸದರ್‌ನ ಒಸಿ-ಮನೋಜ್ ರಾಜ್‌ಬಂಗ್ಶಿ, ಉತ್ತರ ಲಖಿಂಪುರ ಪಿಎಸ್‌ನ ಒಸಿ-ಭಾಸ್ಕರ್ ಕಲಿತಾ ಮತ್ತು ನವೊಬೋಯಿಚಾ ಪೊಲೀಸ್ ಔಟ್‌ಪೋಸ್ಟ್-ಸಂಜೀವ್ ಬೋರಾ ಎಸ್‌ಐ. ಜುನ್ಮೋನಿ ರಾಭಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಸಿಐಡಿ ವಿಚಾರಣೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಲಖಿಂಪುರ-ರುನಾ ನಿಯೋಗ್‌ನ ಎಸ್‌ಪಿಯನ್ನೂ ವರ್ಗಾವಣೆ ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ, ನಾಗಾಂವ್ ಮತ್ತು ಲಖಿಂಪುರ ಎರಡು ಜಿಲ್ಲೆಗಳ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ನಕಲಿ ಚಿನ್ನದ ವ್ಯಾಪಾರಕ್ಕೆ ಬ್ರೇಕ್: "ಜುನ್ಮೋನಿ ರಾಭಾ ಅವರ ಸಾವಿನ ತನಿಖೆಯಲ್ಲಿ ರಾಜ್ಯದಲ್ಲಿ ನಕಲಿ ಚಿನ್ನದ ವ್ಯಾಪಾರದ ಬಗ್ಗೆ ಭಯಾನಕ ಸತ್ಯ ಬಹಿರಂಗವಾಗಿದೆ. ಎಸ್‌ಐ ಜುನ್ಮೋನಿ ರಾಭಾ ಅವರ ಸಾವಿನ ನಂತರ, ಅಸ್ಸೋಂ ಪೊಲೀಸರು ನಕಲಿ ನೋಟು ಮತ್ತು ನಕಲಿ ಚಿನ್ನದ ವ್ಯವಹಾರದ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಅಸ್ಸೋಂನಲ್ಲಿ 30 ದಿನಗಳೊಳಗೆ ನಕಲಿ ಚಿನ್ನದ ವ್ಯವಹಾರವನ್ನು ಕಿತ್ತು ಹಾಕುವುದಾಗಿ" ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ 'ಲೇಡಿ ಸಿಂಗಂ' ಖ್ಯಾತಿಯ ಎಸ್‌ಐ ಸಾವು; ಕುಟುಂಬಸ್ಥರಿಂದ ಕೊಲೆ ಆರೋಪ