ದಿಬ್ರುಗಢ್ (ಅಸ್ಸೋಂ):ಅಸ್ಸೋಂ ಯುವಕನೊಬ್ಬ ರಾತ್ರೋರಾತ್ರಿ ಮಿಲಿಯನೇರ್ ಆಗಿ ಹೊರಹೊಮ್ಮಿದ್ದಾನೆ. ಈ ಯುವಕ ರಚನೆ ಮಾಡಿರುವ ಮೆಸೇಜಿಂಗ್ ಆ್ಯಪ್ಅನ್ನು ಅಮೆರಿಕದ ಕಂಪನಿಯೊಂದು ಬರೋಬ್ಬರಿ 50 ಮಿಲಿಯನ್ ಡಾಲರ್ಗೆ ಖರೀದಿಸಿದೆ. ಭಾರತೀಯ ರೂಪಾಯಿಗೆ ಹೋಲಿಕೆ ಮಾಡಿದರೆ, ಇದರ ಮೌಲ್ಯ ಸರಿಸುಮಾರು 416 ಕೋಟಿ ಆಗಲಿದೆ!.
ಅಸ್ಸೋಂನ ದಿಬ್ರುಗಢ ಮೂಲದ ಕಿಶನ್ ಬಗಾರಿಯಾ ಎಂಬ ಯುವಕನೇ ತನ್ನ ಮೆಸೇಜಿಂಗ್ ಆ್ಯಪ್ ಮೂಲಕ ದೇಶ ಮಾತ್ರವಲ್ಲದೇ ಜಗತ್ತಿನ ಗಮನ ಸೆಳೆದಿದ್ದಾನೆ. ಕಿಶನ್ ಬಗಾರಿಯಾ Texts.com ಎಂಬ ಮೆಸೇಜಿಂಗ್ ಆ್ಯಪ್ ಸೃಷ್ಟಿ ಮಾಡಿದ್ದಾನೆ. ಇದು ವಿವಿಧ ಸಾಮಾಜಿಕ ಮಾಧ್ಯಮ ಆ್ಯಪ್ಗಳ ಮೆಸೇಜ್ಗಳನ್ನು ಒಂದೇ ಪ್ಲಾಟ್‌ಫಾರ್ಮ್ ಮೂಲಕ ರವಾನಿಸುವ ಅಪ್ಲಿಕೇಶನ್ ಆಗಿದೆ. ಅಮೆರಿಕದ ಟೆಕ್ ದೈತ್ಯ ಆಟೋಮ್ಯಾಟಿಕ್ (automattic) ಕಂಪನಿ ಇದನ್ನು ಖರೀದಿ ಮಾಡಿದೆ.
ಮ್ಯಾಟ್ ಮುಲ್ಲೆನ್‌ವೆಗ್ ಸ್ಥಾಪಿಸಿದ ಆಟೋಮ್ಯಾಟಿಕ್ ಕಂಪನಿಯು wordpress.com ಮತ್ತು Tumblr ಎಂಬ ಜನಪ್ರಿಯ ಸಾಮಾಜಿಕ ಜಾಲತಾಣಗಳನ್ನು ಹೊಂದಿದೆ. ಇದೀಗ ಕಿಶನ್ ಸೃಷ್ಟಿಸಿದ Texts.com ಜೊತೆಗೆ 50 ಮಿಲಿಯನ್ ಯುಎಸ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ. ಅಲ್ಲದೇ, ಆ್ಯಪ್ ಅನ್ನು ಖರೀದಿಸಿರುವುದು ಮಾತ್ರವಲ್ಲದೇ, Texts.comನ ಕಾರ್ಯಚಟುವಟಿಕೆಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಕಿಶನ್ ಅವರಿಗೆ ಕಂಪನಿಯು ಕೇಳಿಕೊಂಡಿದೆ.