ಗುವಾಹಟಿ(ಅಸ್ಸೋಂ) :ಅಸ್ಸೋಂ ಮಹಿಳಾ ಸಬ್ಇನ್ಸ್ಪೆಕ್ಟರ್ವೋರ್ವರು ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾವಿಪತಿಯನ್ನೇ ಬಂಧಿಸಿ ಜೈಲಿಗೆ ಕಳುಹಿಸಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ. ತಾನು ಒಎನ್ಜಿಸಿಯಲ್ಲಿ(ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್) ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ ವ್ಯಕ್ತಿ ಮೇಲೆ ವಂಚನೆ ಆರೋಪ ದಾಖಲಾಗಿದೆ.
ಏನಿದು ಪ್ರಕರಣ? :ಅಸ್ಸೋಂನ ನಾಗಾಂವ್ ಜಿಲ್ಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಜುನ್ಮೋನಿ ರಾಭಾ ಸೇವೆ ಸಲ್ಲಿಸುತ್ತಿದ್ದು, ಇವರ ಜೊತೆಗೆ ರಾಣಾ ಪೊಗಾಗ್ ಕಳೆದ ಅಕ್ಟೋಬರ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಜನರ ಬಳಿ ಹಣ ಕೇಳುತ್ತಿದ್ದನು. ಜೊತೆಗೆ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ ಈತನ ಮೇಲಿದೆ.
ಇದನ್ನೂ ಓದಿ:ನಡುರಸ್ತೆಯಲ್ಲೇ ಯುವತಿ ಜೀವಂತ ಸುಟ್ಟ ದುಷ್ಕರ್ಮಿಗಳು.. ಸಹಾಯಕ್ಕಾಗಿ ಅಂಗಲಾಚಿದ್ರೂ ಬಾರದ ಜನ!
ಈತನೊಬ್ಬ ಕಳ್ಳ ಎಂಬುದು ಸಬ್ ಇನ್ಸ್ಪೆಕ್ಟರ್ ಜುನ್ಮೋನಿ ರಾಭಾ ಅವರಿಗೆ ಗೊತ್ತಾಗುತ್ತಿದ್ದಂತೆ ಎಫ್ಐಆರ್ ದಾಖಲು ಮಾಡಿಕೊಂಡಿದ್ದರು. ಬಳಿಕ ಬಂಧನ ಮಾಡಿ ಜೈಲಿಗಟ್ಟಿದ್ದಾರೆ. ಈತ ಇಷ್ಟೊಂದು ದೊಡ್ಡ ವಂಚಕ ಎಂಬುದನ್ನ ತಿಳಿಸಲು ನನ್ನ ಬಳಿ ಬಂದ ಮೂವರು ಜನರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ ಮಹಿಳಾ ಎಸ್‌ಐ.
ರಾಣಾ ಪೊಗಾಗ್ ಬ್ಯಾಗ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಕೆಲವೊಂದು 11 ನಕಲಿ ಸೀಲು ಮತ್ತು ದಾಖಲೆ ಲಭ್ಯವಾಗಿದ್ದು, ಅವುಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಆತನ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ಆರೋಪಿಯನ್ನ ನ್ಯಾಯಾಲಯಕ್ಕೆ ಒಪ್ಪಿಸಿ, ಇದೀಗ ವಿಚಾರಣೆಗೋಸ್ಕರ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಜುನ್ಮೋನಿ ರಾಭಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜೊತೆಗೆ ಈ ವರ್ಷದ ನವೆಂಬರ್ ತಿಂಗಳಲ್ಲಿ ವಿವಾಹ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾಗಿ ಇದೇ ವೇಳೆ ತಿಳಿಸಿದ್ದಾರೆ.