ಗುವಾಹಟಿ (ಅಸ್ಸಾಂ):ಕೊರೊನಾ ರೋಗಲಕ್ಷಣಗಳಿಂದ ಅಸ್ವಸ್ಥರಾಗಿದ್ದ ತನ್ನ ಮಾವನನ್ನು ಮಹಿಳೆಯೊಬ್ಬಳು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಹೋಗುವ ದೃಶ್ಯ ಮನಕಲಕುವಂತಿತ್ತು.
ನಾಗಾವೊದ ರಾಹಾ ಮೂಲದ ನಿಹಾರಿಕಾ ದಾಸ್ (24)ತನ್ನ ಕುಟುಂಬದೊಂದಿಗೆ ವಾಸವಾಗಿದ್ದಳು. ಪತಿ ಸಿಲಿಗುರಿಯಲ್ಲಿ ಕೆಲಸ ಮಾಡುತ್ತಿದ್ದು, ಆತನ ತಂದೆಯನ್ನು ಸೊಸೆಯೇ ನೋಡಿಕೊಳ್ಳುತ್ತಿದ್ದಾಳೆ. ಆದ್ರೆ ಅವರ ಮಾವ (ಗಂಡನ ತಂದೆ) ತುಲೇಶ್ವರ ದಾಸ್ (75) ಅವರಿಗೆ ಜೂನ್ 2 ರಂದು ತೀವ್ರ ಅನಾರೊಗ್ಯ ಕಾಣಲಾರಂಭಿಸಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಲು ತುರ್ತಾಗಿ ಹೊರಡಬೇಕಾಗಿ ಆಕೆ ಆಟೋ ವ್ಯವಸ್ಥೆ ಮಾಡಿದ್ದಳು. ಆದರೆ ತನ್ನ ನಿವಾಸದ ಹಾದಿ ಸರಿಯಿರದ ಕಾರಣ ಆಟೋ ಆಕೆಯ ಮನೆ ಬಾಗಿಲಿಗೆ ಬರಲಿಲ್ಲ.
ತುರ್ತು ಸಂದರ್ಭವಾದ ಕಾರಣ ದಾರಿ ಕಾಣದ ಆಕೆ ತನ್ನ ಅಸ್ವಸ್ಥ ಮಾವನನ್ನು ಹೆಗಲ ಮೇಲೆ ಹೊತ್ತುಕೊಂಡು ಆಟೋಗೆ ಕರೆದುಕೊಂಡು ಬಂದಿದ್ದಾಳೆ. ಅಲ್ಲಿಂದ ಅವರನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾಳೆ. ಅಲ್ಲಿ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಹಾಗೂ ದಾಸ್ ಆರೋಗ್ಯ ಮತ್ತಷ್ಟು ಹದಗೆಡುತ್ತಿದ್ದಂತೆ ಆಸ್ಪತ್ರೆಯವರು ಅವರನ್ನು ನಗರದ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದ್ರೆ ದಾಸ್ಗೆ ನಿಲ್ಲಲೂ ಕೂಡಾ ಶಕ್ತಿ ಇರಲಿಲ್ಲ. ಆ ಸಂದರ್ಭ ಅಲ್ಲಿ ಸ್ಟ್ರೆಚರ್ ಕೂಡಾ ಸಿಗಲಿಲ್ಲ. ಬೇರೆಡೆ ಕರೆದೊಯ್ಯಲು ಆಸ್ಪತ್ರೆಯ ವಾಹನ ನಿಲುಗಡೆ ತಾಣಕ್ಕೆ ಆಕೆಗೆ ಪುನಃ ಮಾವನನ್ನು ಹೊತ್ತುಕೊಂಡೇ ಬಂದಿದ್ದಳು.