ಕರ್ನಾಟಕ

karnataka

ETV Bharat / bharat

Assam crime: ಅಸ್ಸಾಂನಲ್ಲಿ ಬಾಂಬ್​ ತಯಾರಿಸಿ ಮಣಿಪುರಕ್ಕೆ ಸಾಗಾಟ; 200 ಡಿಟೋನೇಟರ್ಸ್​, ಜಿಲೆಟಿನ್​ ಸ್ಟಿಕ್​ ವಶಕ್ಕೆ - ಅಸ್ಸಾಂನಿಂದ ಬಾಂಬ್ ತಯಾರಿಸಿ ಮಣಿಪುರಕ್ಕೆ ರವಾನೆ

Assam police seize Bomb making materials: ಮಣಿಪುರದಲ್ಲಿ ವಿಧ್ವಂಸಕ ಕೃತ್ಯ ಉಂಟುಮಾಡಲು ಪಕ್ಕದ ರಾಜ್ಯ ಅಸ್ಸಾಂನಿಂದ ಬಾಂಬ್​ಗಳನ್ನು ತಯಾರಿಸುವ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ತನಿಖೆ ನಡೆಯುತ್ತಿದೆ.

ಅಸ್ಸಾಂನಿಂದ ಬಾಂಬ್ ತಯಾರಿಸಿ ಮಣಿಪುರಕ್ಕೆ ರವಾನೆ
ಅಸ್ಸಾಂನಿಂದ ಬಾಂಬ್ ತಯಾರಿಸಿ ಮಣಿಪುರಕ್ಕೆ ರವಾನೆ

By

Published : Aug 7, 2023, 6:23 PM IST

ತೇಜ್​ಪುರ (ಅಸ್ಸಾಂ) :ತೀವ್ರಜನಾಂಗೀಯ ಸಂಘರ್ಷದಿಂದ ಹೊತ್ತಿ ಉರಿಯುತ್ತಿರುವ ಮಣಿಪುರಕ್ಕೆ ಕೊಂಡೊಯ್ಯಲು ಸಿದ್ಧಪಡಿಸಲಾಗಿದ್ದ ಭಾರಿ ಪ್ರಮಾಣದ ಸ್ಫೋಟಕಗಳನ್ನು ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ದಾಳಿಯ ವೇಳೆ ತಪ್ಪಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಬಾಂಬ್‌ಗಳನ್ನು ತಯಾರಿಸಿ ಅವುಗಳನ್ನು ಹಿಂಸಾಚಾರಕ್ಕೀಡಾಗಿರುವ ಮಣಿಪುರಕ್ಕೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ತಕ್ಷಣವೇ ಜಾಗೃತರಾಗಿ ದಾಳಿ ನಡೆಸಿದ್ದಾರೆ. ಕ್ಯಾಚಾರ್ ಜಿಲ್ಲೆಯ ರಾಣಿಘಾಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಗೋಣಿಚೀಲಗಳಲ್ಲಿ ತುಂಬಿದ್ದ ಸ್ಫೋಟಕಗಳನ್ನು ಆರೋಪಿಗಳು ವಾಹನದಲ್ಲಿ ಸಾಗಿಸುತ್ತಿದ್ದರು.

ಪೊಲೀಸರನ್ನು ಕಂಡ ತಕ್ಷಣವೇ ಆರೋಪಿಗಳು ಪೇರಿ ಕಿತ್ತಿದ್ದಾರೆ. ವಾಹನವನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಸುಮಾರು 200 ಜಿಲೆಟಿನ್ ಸ್ಟಿಕ್‌ಗಳು ಮತ್ತು 200 ಡಿಟೋನೇಟರ್‌ಗಳು ಕಂಡುಬಂದಿವೆ. ಸ್ಫೋಟಕ ಮತ್ತು ವಾಹನವನ್ನು ಸೀಜ್ ಮಾಡಲಾಗಿದೆ. ತಪ್ಪಿಸಿಕೊಂಡ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಬಾಂಬ್ ತಯಾರಿಕಾ ವಸ್ತುಗಳನ್ನು ಎಲ್ಲಿಂದ ಸಂಗ್ರಹಿಸಲಾಗಿದೆ. ವಶಪಡಿಸಿಕೊಂಡ ಸ್ಫೋಟಕಗಳನ್ನು ಮಣಿಪುರದ ಯಾವ ಪ್ರದೇಶ ಮತ್ತು ಯಾರಿಗೆ ರವಾನಿಸಲಾಗುತ್ತಿತ್ತು ಎಂಬ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ:ಮಣಿಪುರದ ಚುರಾಚಂದ್‌ಪುರ ಮತ್ತು ಬಿಷ್ಣುಪುರ್ ಜಿಲ್ಲೆಗಳ ಗಡಿಯಲ್ಲಿರುವ ಕಾಂಗ್‌ಭಾಯ್ ಮತ್ತು ಕೊಕ್ತಕ್ ಪ್ರದೇಶಗಳಲ್ಲಿ ಭಾನುವಾರ ಗುಂಡಿನ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಕುಕಿ ಸಮುದಾಯ ಆಯೋಜಿಸಿದ್ದ ಸಾಮೂಹಿಕ ಅಂತ್ಯಕ್ರಿಯೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಘರ್ಷಣೆ ನಡೆದಿತ್ತು. ಘರ್ಷಣೆಯ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದರು.

ಇದಕ್ಕೂ ಮೊದಲು, ಶನಿವಾರ ಇಂಫಾಲ್​ ಪಶ್ಚಿಮ ಜಿಲ್ಲೆಯಲ್ಲಿ 15 ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಿಂಸಾಚಾರ ಮತ್ತೆ ಭುಗಿಲೆದ್ದಿತ್ತು. ಲಾಂಗೋಲ್ ಗೇಮ್ಸ್ ಗ್ರಾಮದಲ್ಲಿ ಗುಂಪು ಘರ್ಷಣೆ ಬಳಿಕ ಬೆಂಕಿ ಮನೆಗಳಿಗೆ ಹಚ್ಚಲಾಗಿತ್ತು. ಗುಂಪುಗಳನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಭದ್ರತಾ ಸಿಬ್ಬಂದಿ ಹಲವು ಸುತ್ತಿನ ಅಶ್ರುವಾಯು ಸಿಡಿಸಿದ್ದರು. ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿದ್ದರು. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರ ಪುನರ್ವಸತಿ ಮೇಲ್ವಿಚಾರಣೆಗೆ ನಿವೃತ್ತ ಜಡ್ಜ್​ ಸಮಿತಿ:ಭೀಕರ ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಜನರಿಗೆ ನೀಡಲಾಗಿರುವ ಪರಿಹಾರ ಮತ್ತು ಪುನರ್ವಸತಿ ಮೇಲ್ವಿಚಾರಣೆಗೆ ಮೂವರು ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶರ ಸಮಿತಿ ರಚಿಸಿ ಸುಪ್ರೀಂಕೋರ್ಟ್​ ಆದೇಶಿಸಿದೆ.

ಈ ಕುರಿತು ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಈಶಾನ್ಯ ರಾಜ್ಯದಲ್ಲಿ ಪರಿಸ್ಥಿತಿ ಭೀಕರವಾಗಿದೆ. ಸಂತ್ರಸ್ತರಿಗೆ ನೀಡಲಾಗಿರುವ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಲು ಮೂವರು ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶರ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಜಮ್ಮು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಗೀತಾ ಮಿತ್ತಲ್ ಅಧ್ಯಕ್ಷರಾಗಿರಲಿದ್ದು, ನ್ಯಾ.ಶಾಲಿನಿ ಪಿ.ಜೋಶಿ ಮತ್ತು ನ್ಯಾ. ಆಶಾ ಮೋಹನ್‌ ಸಮಿತಿಯಲ್ಲಿರಲಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ತಿಳಿಸಿದರು.

ಇದನ್ನೂ ಓದಿ:Manipur violence: ಮಣಿಪುರದಲ್ಲಿ ಪರಿಹಾರ, ಪುನರ್ವಸತಿ: ಮೂವರು ನಿವೃತ್ತ ಮಹಿಳಾ ನ್ಯಾಯಾಧೀಶರ ಸಮಿತಿ ನೇಮಿಸಿದ ಸುಪ್ರಿಂ ಕೋರ್ಟ್

ABOUT THE AUTHOR

...view details