ಗುವಾಹಟಿ (ಅಸ್ಸೋಂ) :ಪಿಎಫ್‌ಐ ಸಂಘಟನೆ ವಿರುದ್ಧ ದೇಶದಲ್ಲಿ ಹಲವಾರು ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಬಾಂಗ್ಲಾದೇಶ ಮೂಲದ ಅಲ್-ಖೈದಾ ಉಗ್ರ ಸಂಘಟನೆಯ ಬೆಂಬಲಿತ ಸಂಘಟನೆಯಾದ ಅನ್ಸರುಲ್ಲಾ ಬಾಂಗ್ಲಾ ತಂಡದೊಂದಿಗೆ ಗುರುತಿಸಿಕೊಂಡ ಕಾರಣ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ವಿರುದ್ಧ ಅಸ್ಸೋಂನಲ್ಲಿ 16 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದಲ್ಲದೇ, ಅದರ ವಿದ್ಯಾರ್ಥಿ ವಿಭಾಗವಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್ಐ)ದ ವಿರುದ್ಧ ಮತ್ತೆರಡು ಕೇಸ್ ದಾಖಲಿಸಲಾಗಿದೆ.
ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಗುಂಪಾದ ಅನ್ಸರುಲ್ಲಾದ ಜೊತೆಗೂಡಿ ಕೆಲಸ ಮಾಡುತ್ತಿರುವ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. 12 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಉಳಿದ ಪ್ರಕರಣಗಳ ತನಿಖೆ ನಡೆಯುತ್ತಿದೆ. ಏಪ್ರಿಲ್ 15ರಂದು ಬಾರ್ಪೇಟಾ ಜಿಲ್ಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಕಿಬುಲ್ ಹುಸೇನ್ ಸೇರಿದಂತೆ ಅನ್ಸಾರುಲ್ಲಾ ಬಾಂಗ್ಲಾ ತಂಡದ 16 ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ವಿಶೇಷ ಶಾಖೆ) ಹಿರೇನ್ನಾಥ್ ತಿಳಿಸಿದರು.
ವಿಚಾರಣೆಯ ವೇಳೆ ಮಕಿಬುಲ್ ಹುಸೇನ್ ಪಿಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಪಿಎಫ್‌ಐ ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಗುಂಪು ಅನ್ಸರುಲ್ಲಾ ಬಾಂಗ್ಲಾ ತಂಡದೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ. ಹುಸೇನ್ ಅಸ್ಸೋಂನಲ್ಲಿ ಪಿಎಫ್‌ಐಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ. ಅನ್ಸಾರುಲ್ಲಾ ಬಾಂಗ್ಲಾ ತಂಡದೊಂದಿಗೆ ಸಂಪರ್ಕ ಹೊಂದಿದ್ದಾನೆ. ಕೆಲವರು ಉಗ್ರ ಮೆಹದಿ ಹಸನ್ ಬಳಿ ತರಬೇತಿ ಪಡೆದಿದ್ದಾರೆ ಎಂದು ಹಿರೇನ್ನಾಥ್ ಮಾಹಿತಿ ನೀಡಿದರು.
ಬಾಂಗ್ಲಾದೇಶ ಮೂಲದ ಅನ್ಸರುಲ್ಲಾ ಬಾಂಗ್ಲಾ ತಂಡವು ಅಲ್-ಖೈದಾ ಬೆಂಬಲಿತ ಭಯೋತ್ಪಾದಕ ಸಂಘಟನೆಯಾಗಿದೆ. ಅಸ್ಸೋಂನ 10 ಜಿಲ್ಲೆಗಳಲ್ಲಿ ಹಲವಾರು ಪಿಎಫ್‌ಐ ಕಾರ್ಯಕರ್ತರು ಬಳಸಿಕೊಂಡು ಕೆಲಸ ಮಾಡುತ್ತಿದೆ. ಪಿಎಫ್‌ಐ ಸಂಘಟನೆಯ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದ್ದಾರೆ. ಪಿಎಫ್‌ಐ ಸಂಘಟನೆ ನಿಷೇಧಿಸಿ, ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಅಸ್ಸೋಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.
ಓದಿ:ರಾಕೇಶ್ ಟಿಕಾಯತ್ಗೆ ಮಸಿ ಬಳಿದ ಪ್ರಕರಣದಲ್ಲಿ ಮಹಿಳಾ ಸಂಘಟನೆಯೊಂದರ ಅಧ್ಯಕ್ಷೆ ಉಮಾ ಬಂಧನ!