ಶಿವಸಾಗರ್ (ಅಸ್ಸೋಂ): ಮಾನವ ಕಳ್ಳಸಾಗಣೆ ಹಾಗೂ ಶೋಷಣೆಯ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ನಾಲ್ಕು ವರ್ಷಗಳಿಂದ ಮಾನವ ಕಳ್ಳಸಾಗಣೆ ದಂಧೆಯ ಸೆರೆಯಲ್ಲಿದ್ದ ಅಸ್ಸೋಂನ ವ್ಯಕ್ತಿಯೊಬ್ಬರನ್ನು ಅರುಣಾಚಲ ಪ್ರದೇಶದಲ್ಲಿ ರಕ್ಷಣೆ ಮಾಡಲಾಗಿದೆ. ಇದರೊಂದಿಗೆ ಆಘಾತಕಾರಿ ಮಾಹಿತಿ ಕೂಡ ಹೊರ ಬಿದ್ದಿದೆ.
ಶಿವಸಾಗರ್ ಜಿಲ್ಲೆಯ ಹಲುಯಟಿಂಗ್ ಬಾರ್ಸಿಲಾ ನಿವಾಸಿ ತುಲಾನ್ ಗೊಗೊಯ್ ಎಂಬಾತ ನಾಲ್ಕು ವರ್ಷಗಳ ಹಿಂದೆ ಮಾನವ ಕಳ್ಳಸಾಗಣೆಯ ಬಲೆಗೆ ಬಿದ್ದಿದ್ದರು. ಇದೀಗ ಅನಿನಿ ಪೊಲೀಸ್ ಠಾಣೆಯ ಅಧಿಕಾರಿಗಳ ನೆರವಿನೊಂದಿಗೆ ಸೆಪ್ಟೆಂಬರ್ 27ರಂದು ಆತನನ್ನು ರಕ್ಷಿಸಲಾಗಿದೆ. ಅರುಣಾಚಲ ಪ್ರದೇಶದ ದಿಬಾಂಗ್ ವ್ಯಾಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಪತ್ತೆ ಹಚ್ಚಲಾಗಿದೆ. ಈಗ ಈತ ತನ್ನ ಕುಟುಂಬ ಸದಸ್ಯರನ್ನು ಸೇರಿಕೊಂಡಿದ್ದು, ತುಲಾನ್ ಗೊಗೊಯ್ ತಾನು ಅನುಭವಿಸಿದ ಸಂಕಟ, ಸಂಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ.
ಕೆಲಸ ಹುಡುಕಿಕೊಂಡು ಹೋಗಿದ್ದ ವ್ಯಕ್ತಿ: ತುಲಾನ್ ಗೊಗೊಯ್ ನಾಲ್ಕು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಹೋಗಿದ್ದರು. ಆದಾಗ್ಯೂ, ತಮ್ಮದೇ ಸಂಬಂಧಿಗಳಾದ ದುಲು ಬುರಾಗೊಹೈನ್ ಮತ್ತು ಆತನ ಸ್ನೇಹಿತ ಅರವಿಂದ್ ಹಜಾರಿಕಾ ಮೂಲಕ ಮಾನವ ಕಳ್ಳಸಾಗಣೆ ಬಲೆಗೆ ಸಿಲುಕಿಕೊಂಡಿದ್ದರು. ಹೆಚ್ಚಿನ ಮಾಸಿಕ ಸಂಬಳ ನೀಡುವ ಅರವಿಂದ್ ಹಜಾರಿಕಾ ಆಮಿಷವೊಡ್ಡಿದ್ದರು. ನಂತರ ಅರುಣಾಚಲ ಪ್ರದೇಶದಲ್ಲಿ ಗಣನೀಯ ಮೊತ್ತದ ಹಣಕ್ಕೆ ತನ್ನನ್ನು ಮಾರಾಟ ಮಾಡಿದ್ದರು ಎಂದು ಗೊಗೊಯ್ ಹೇಳಿದ್ದಾರೆ.