ಗುವಾಹಟಿ (ಅಸ್ಸೋಂ):ಕೆಲವೊಮ್ಮೆ ನಮ್ಮ ಆತ್ಮೀಯರೇ ನಮಗೆ ಮುಳ್ಳಾಗುತ್ತಾರೆ ಎಂಬುದಕ್ಕೆ ಈ ಘಟನೆ ನಿದರ್ಶನ. ವೃತ್ತಿಯಲ್ಲಿ ಬಾಕ್ಸರ್ ಆಗಿರುವ ಅಸ್ಸೋಂ ಮಹಿಳೆಯನ್ನು ನೈಜೀರಿಯಾದಲ್ಲಿ ಒತ್ತೆಯಾಳಾಗಿಟ್ಟುಕೊಳ್ಳಲಾಗಿದೆ. ಗೆಳೆಯನನ್ನು ನಂಬಿ ಹೋದ ಆಕೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಆಕೆಯನ್ನು ಬಿಡಿಸಿಕೊಂಡು ಬರಲು ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ.
ಅಸ್ಸೋಂನ ಪ್ರತಿಭಾವಂತ ಬಾಕ್ಸರ್ ಆಗಿರುವ ಬೊರ್ನಾಲಿ ಬರುವಾ ಸೈಕಿಯಾ ನೈಜೀರಿಯಾದಲ್ಲಿ ಗೆಳೆಯನ ಕುತಂತ್ರಕ್ಕೆ ಸಿಲುಕಿದವರು. ಅಕ್ಟೋಬರ್ 28 ರಂದು ಗೆಳೆಯನ ನಂಬಿ ನೈಜೀರಿಯಾಕ್ಕೆ ಪ್ರವಾಸ ಹೋದಾಗ ಅಲ್ಲೇ, ಒತ್ತೆಯಾಳಾಗಿದ್ದಾರೆ. ಪಾಸ್‌ಪೋರ್ಟ್, ವೀಸಾ ಇಲ್ಲದೇ ಅವರು ವಾಪಸ್ ಬರಲು ಕಷ್ಟವಾಗಿದೆ.
ಪ್ರಕರಣದ ಹಿನ್ನೆಲೆ:ಬಾಕ್ಸರ್ ಬೊರ್ನಾಲಿ ಬರುವಾ ಸೈಕಿಯಾ ಅವರಿಗೆ 6 ತಿಂಗಳ ಹಿಂದೆ ನೈಜೀರಿಯಾದ ಕಿಂಗ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಆದರೆ, ಬೊರ್ನಾಲಿ ಕುಟುಂಬದ ಜೊತೆಗೆ ಉತ್ತಮವಾಗಿ ನಡೆದುಕೊಂಡಿದ್ದ. ಈತನನ್ನು ಬಾಕ್ಸರ್ ಮತ್ತು ಆಕೆಯ ಪತಿ ಒಳ್ಳೆಯ ಸ್ನೇಹಿತ ಎಂದೇ ಭಾವಿಸಿದ್ದರು. ಬಳಿಕ ಕಿಂಗ್ ಪರಿಚಯದ ಆಧಾರದ ಮೇಲೆ ಬೊರ್ನಾಲಿ ಅವರು ನೈಜೀರಿಯಾಕ್ಕೆ ಪ್ರವಾಸ ತೆರಳಲು ನಿರ್ಧರಿಸಿದರು.
ಅದರಂತೆ ಅಕ್ಟೋಬರ್ 28 ರಂದು ಪ್ರವಾಸಿ ವೀಸಾದ ಮೇಲೆ ತೆರಳಿದ್ದರು. ಬೊರ್ನಾಲಿ ಅವರು ನೈಜೀರಿಯಾದ ಲಾಗೋಸ್‌ಗೆ ಬಂದಿಳಿದಾಗ ಇಡೀ ಕತೆಯೇ ಬದಲಾಗಿದೆ. ಆಕೆ ಕಿಂಗ್ ಬಳಿ ಹೋದಾಗ ಆತನ ಮೋಸದಾಟಕ್ಕೆ ಸಿಲುಕಿದ್ದಾಳೆ. ನಂಬಿಕಸ್ಥ ಗೆಳೆಯ ಎಂದುಕೊಂಡಿದ್ದ ಕಿಂಗ್ ತನ್ನ ನಿಜಬಣ್ಣವನ್ನು ಪ್ರದರ್ಶಿಸಿದ್ದಾನೆ. ಆಕೆಯ ಪಾಸ್‌ಪೋರ್ಟ್, ವೀಸಾ, ಜೊತೆಗಿದ್ದ ಒಂದಷ್ಟು ಹಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡಿದ್ದಾನೆ. ಬಳಿಕ ಆಕೆಯನ್ನು ಒಂದೆಡೆ ಕೂಡಿ ಹಾಕಿದ್ದಾನೆ.