ಅಸ್ಸಾಂ (ಗುವಾಹಟಿ): ರಾಜ್ಯದಲ್ಲಿ ಗುರುವಾರದಿಂದ ಭಾರಿ ಮಳೆ ಸುರಿಯುತ್ತಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿಪಾತ್ರದ ಜನರೂ ಸೇರಿದಂತೆ ಒಟ್ಟು 4,95,799 ಜನರು ತೊಂದರೆಗೆ ಸಿಲುಕಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಪ್ರವಾಹಪೀಡಿತ ತಮುಲ್‌ಪುರ ಜಿಲ್ಲೆಯಲ್ಲಿ ಓರ್ವ ಮೃತಪಟ್ಟಿರುವ ಮಾಹಿತಿ ಇದೆ ಎಂದು ಅಸ್ಸಾಂ ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಇತ್ತೀಚಿನ ತನ್ನ ಬುಲೆಟಿನ್‌ನಲ್ಲಿ ಮಾಹಿತಿ ನೀಡಿದೆ.
ಬಾಜಲಿ, ಬಕ್ಸಾ, ಬಾರ್ಪೇಟಾ, ಬಿಸ್ವನಾಥ್, ಬೊಂಗೈಗಾಂವ್, ಚಿರಾಂಗ್, ದರ್ರಾಂಗ್, ಧೇಮಾಜಿ, ಧುಬ್ರಿ, ದಿಬ್ರುಗಢ್, ಗೋಲಾಘಾಟ್, ಹೋಜೈ, ಕಾಮ್ರೂಪ್, ಕೊಕ್ರಜಾರ್, ಲಖಿಂಪುರ, ಮಜುಲಿ, ನಾಗಾಂವ್, ನಲ್ಬರಿ ಮತ್ತು ಸೋನಿತ್‌ಪುರ್ ಸೇರಿದಂತೆ ಹಲವು ಜಿಲ್ಲೆಗಳು ಪ್ರವಾಹದಲ್ಲಿ ಸಿಲುಕಿವೆ. ಬಾರ್ಪೇಟಾದಲ್ಲಿ 65221 ಜನರು, ಲಖಿಂಪುರದಲ್ಲಿ 25613 ಜನರು, ಬಕ್ಸಾದಲ್ಲಿ 24023 ಜನರು, ತಾಮುಲ್‌ಪುರದಲ್ಲಿ 19208 ಜನರು, ದರ್ರಾಂಗ್‌ನಲ್ಲಿ 13704 ಜನರು, ಕೊಕ್ರಜಾರ್ ಜಿಲ್ಲೆಯಲ್ಲಿ 6538 ಜನರು ಪ್ರವಾಹಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ಇದೆ.
ಬಜಾಲಿ ಮತ್ತು ದರ್ರಾಂಗ್ ಜಿಲ್ಲೆಯಲ್ಲಿ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿದೆ. ಇಲ್ಲಿನ 58 ಕಂದಾಯ ಪ್ರದೇಶ ಸೇರಿದಂತೆ ಒಟ್ಟು 1,350 ಹಳ್ಳಿಗಳು ಪ್ರವಾಹಕ್ಕೆ ಸಿಲುಕಿವೆ. ರಾಜ್ಯ ಸರ್ಕಾರದಿಂದ ಈಗಾಗಲೇ 162 ತಾತ್ಕಾಲಿಕ ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು 14,035 ಜನರು ಇದರಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಆಹಾರ, ಔಷಧ ಮತ್ತು ಇತರ ಅಗತ್ಯ ವಸ್ತುಗಳ ಕೊರತೆ ಕಂಡು ಬಂದಿದ್ದು ಅವುಗಳ ಪೂರೈಕೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.