ಗುವಾಹಟಿ(ಅಸ್ಸೋಂ) : ಎಡ ಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ಅಸ್ಸೋಂನಲ್ಲಿ ಪ್ರವಾಹ ಉಂಟಾಗಿದ್ದು, ಈ ಪರಿಸ್ಥಿತಿ ನಿನ್ನೆ ಭಾನುವಾರವು ಮುಂದುವರೆದಿತ್ತು. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದೆಲ್ಲೆಡೆ ಹೊಸ ಪ್ರದೇಶಗಳು ಕೂಡ ಮುಳುಗಡೆಯಾಗಿವೆ.
ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ASDMA) ದೈನಂದಿನ ಪ್ರವಾಹ ವರದಿಯ ಪ್ರಕಾರ, ಕ್ಯಾಚಾರ್, ದರ್ರಾಂಗ್, ಧೇಮಾಜಿ, ದಿಬ್ರುಗಢ್, ಗೋಲಾಘಾಟ್, ಹೋಜೈ, ಲಖಿಂಪುರ, ನಾಗಾಂವ್, ನಲ್ಬರಿ, ಸೋನಿತ್‌ಪುರ, ತಿನ್ಸುಕಿಯಾ ಮತ್ತು ಉದಲ್ಗುರಿ ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ 33,400 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ.
ಇನ್ನು ಶನಿವಾರದವರೆಗೆ ಅಸ್ಸಾಂನ ಎಂಟು ಜಿಲ್ಲೆಗಳಲ್ಲಿ 37,500 ಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಿಲುಕಿದ್ದರು. ರಾಜ್ಯದಲ್ಲಿ ಲಖಿಂಪುರ್ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, ಇಲ್ಲಿ 25,200, ದಿಬ್ರುಗಢ್ನಲ್ಲಿ 3,800, ಹಾಗೆ ಟಿನ್ಸುಕಿಯಾದಲ್ಲಿ ಸುಮಾರು 2,700 ಕ್ಕೂ ಹೆಚ್ಚು ಜನರು ಪ್ರವಾಹದಿಂದ ತೊಂದರೆಗೀಡಾಗಿದ್ದಾರೆ. ನೇಮತಿಘಾಟ್‌ನಲ್ಲಿ ಬ್ರಹ್ಮಪುತ್ರ ನದಿ, ಎನ್‌ಎಚ್ ರೋಡ್ ಕ್ರಾಸಿಂಗ್‌ನಲ್ಲಿ ಅದರ ಉಪನದಿಗಳಾದ ಪುತಿಮರಿ ಮತ್ತು ಕಂಪುರದ ಕೊಪಿಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ವರದಿ ತಿಳಿಸಿದೆ.
ರಾಜ್ಯ ಆಡಳಿತವು ಮೂರು ಜಿಲ್ಲೆಗಳಲ್ಲಿ 16 ಪರಿಹಾರ ವಿತರಣಾ ಕೇಂದ್ರಗಳ ಜೊತೆಗೆ ಪ್ರಸ್ತುತ ಒಂಬತ್ತು ಜನರು ತಂಗಿರುವ ಒಂದು ಪರಿಹಾರ ಶಿಬಿರವನ್ನು ರಚಿಸಿದ್ದು ಪೀಡಿತ ಜನರನ್ನು ನಿರ್ವಹಿಸುತ್ತಿದೆ. ಪ್ರಸ್ತುತ 142 ಗ್ರಾಮಗಳು ಜಲಾವೃತವಾಗಿದ್ದು, ಅಸ್ಸೋಂನಾದ್ಯಂತ 1,510.98 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬಿಸ್ವನಾಥ್, ಬೊಂಗೈಗಾಂವ್, ದಿಬ್ರುಗಢ್, ಕೊಕ್ರಜಾರ್, ಲಖಿಂಪುರ, ಮಜುಲಿ, ಮೋರಿಗಾಂವ್, ನಾಗಾಂವ್, ಶಿವಸಾಗರ್, ಸೋನಿತ್‌ಪುರ, ದಕ್ಷಿಣ ಸಲ್ಮಾರಾ ಮತ್ತು ಉದಲ್ಗುರಿ ಜಿಲ್ಲೆಗಳಲ್ಲಿ ಭಾರಿ ಸವೆತ ಸಂಭವಿಸಿದೆ ಎಂದು ASDMA ತಿಳಿಸಿದೆ.