ಗುವಾಹಟಿ (ಅಸ್ಸೋಂ): ಈಶಾನ್ಯ ರಾಜ್ಯ ಅಸ್ಸೋಂದಲ್ಲಿ ಪ್ರವಾಹದ ಅಬ್ಬರ ಮುಂದುವರಿದಿದೆ. ಇದರ ನಡುವೆ ಭೂತಾನ್‌ನ ಕುರಿಚು ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಶನಿವಾರದಿಂದ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ರಾಜ್ಯದ ಹಲವು ಹೊಸ ಪ್ರದೇಶಗಳು ಜಲಾವೃತಗೊಂಡಿವೆ. ರಾಜ್ಯಾದ್ಯಂತ ಈವರೆಗೆ ಸುಮಾರು ಒಂದು ಲಕ್ಷ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ.
ಅಸ್ಸೋಂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಾಜ್ಯದ ಎಲ್ಲ ನದಿಗಳು ಅಪಾಯದ ಮಟ್ಟಕ್ಕಿಂತ ಕಡಿಮೆಯಾಗಿ ಹರಿಯುತ್ತಿವೆ. ಆದರೆ, ಪ್ರಸ್ತುತ ರಾಜ್ಯದ 13 ಜಿಲ್ಲೆಗಳು ಪ್ರವಾಹದ ಸುಳಿಯಲ್ಲಿವೆ. ಬಿಸ್ವನಾಥ್, ಚಿರಾಂಗ್, ದರ್ರಾಂಗ್, ಧೇಮಾಜಿ, ದಿಬ್ರುಗಢ್, ಗೋಲಾಘಾಟ್, ಲಖಿಂಪುರ, ಮಜುಲಿ, ಮೊರಿಗಾಂವ್, ನಾಗಾಂವ್, ಗೀತ್‌ಪುರ್, ಸೋನಿತ್‌ಪುರ್ ಮತ್ತು ತಮುಲ್‌ಪುರ್ ಜಿಲ್ಲೆಗಳು ಪ್ರವಾಹ ಪೀಡಿತ ಜಿಲ್ಲೆಗಳಾಗಿವೆ.
ಈ 13 ಜಿಲ್ಲೆಗಳ 28 ಕಂದಾಯ ವೃತ್ತ ಅಧಿಕಾರಿಗಳ ಕಚೇರಿ ವ್ಯಾಪ್ತಿಯ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಒಟ್ಟು 371 ಗ್ರಾಮಗಳು ಪ್ರವಾಹದಿಂದ ಹಾನಿಗೊಳಗಾಗಿವೆ. ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 44,838 ಪುರುಷರು, 35,722 ಮಹಿಳೆಯರು ಮತ್ತು 18,280 ಮಕ್ಕಳು ಸೇರಿದಂತೆ ಒಟ್ಟು 98,840 ಜನರು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ:ಪ್ರವಾಹದ ರಭಸಕ್ಕೆ ಬ್ಯಾಲೆನ್ಸ್ ಕಳೆದುಕೊಂಡ ದೋಣಿ... ಅಪಾಯದಿಂದ ಪಂಜಾಬ್ ಸಿಎಂ ಪಾರು