ಗುವಾಹಟಿ: ಅಸ್ಸೋಂನಲ್ಲಿ ಬಾಲ್ಯ ವಿವಾಹ ತಡೆ ಕಾರ್ಯಾಚರಣೆ ಸೋಮವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಈವರೆಗೆ ಒಟ್ಟು 2,441 ಮಂದಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ರಾಜ್ಯಾದ್ಯಂತ ದಾಖಲಾಗಿರುವ 4,074 ಎಫ್‌ಐಆರ್‌ಗಳನ್ನು ಆಧರಿಸಿ ಈ ಬಂಧನಗಳನ್ನು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದುವರೆಗೆ ಒಟ್ಟು ಬಂಧನ - 2441. ಅಸ್ಸೋಂನಲ್ಲಿ ಬಾಲ್ಯವಿವಾಹದ ವಿರುದ್ಧ ಶಿಸ್ತುಕ್ರಮ ಮುಂದುವರಿದಿದೆ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ. 2026ರ ವಿಧಾನಸಭಾ ಚುನಾವಣೆವರೆಗೂ ಈ ಅಭಿಯಾನ ಮುಂದುವರಿಯಲಿದೆ ಎಂದು ಅವರು ಈ ಹಿಂದೆ ಪ್ರತಿಪಾದಿಸಿದ್ದರು.
ಬಾಲ್ಯವಿವಾಹ ವಿರುದ್ಧದ ಕಾರ್ಯಾಚರಣೆಗೆ ಪ್ರತಿಪಕ್ಷಗಳು ಟೀಕೆ ಮಾಡುತ್ತಿದ್ದು, ಸಂತ್ರಸ್ತ ಕುಟುಂಬಗಳು ವಿವಿಧೆಡೆ ಪ್ರತಿಭಟನೆ ನಡೆಸಿವೆ. ಭಾನುವಾರ ಸಂಜೆಯವರೆಗೆ, ಬಿಸ್ವನಾಥ್ ಜಿಲ್ಲೆಯಲ್ಲಿ 139 ಜನರನ್ನು ಬಂಧಿಸಲಾಗಿದೆ. ಬಾರ್ಪೇಟಾದಲ್ಲಿ 130 ಮತ್ತು ಧುಬ್ರಿಯಲ್ಲಿ 126 ಜನರನ್ನು ಬಂಧಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಧುಬ್ರಿಯಲ್ಲಿ ಬಾಲ್ಯ ವಿವಾಹಗಳ ವಿರುದ್ಧ ಅತಿ ಹೆಚ್ಚು 374 ಎಫ್‌ಐಆರ್ ದಾಖಲಿಸಲಾಗಿದೆ. ಹೋಜೈನಲ್ಲಿ 255 ಮತ್ತು ಮೊರಿಗಾಂವ್ನಲ್ಲಿ 224 ಪ್ರಕರಣ ದಾಖಲಾಗಿವೆ. ಬಂಧನಕ್ಕೊಳಗಾದವರ ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರು ಪೊಲೀಸ್ ಠಾಣೆಗಳ ಮುಂದೆ ಜಮಾಯಿಸಿ ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಬಾರಾಕ್ ಕಣಿವೆ, ಮೋರಿಗಾಂವ್, ಧುಬ್ರಿ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಸಂತ್ರಸ್ತ ಕುಟುಂಬಗಳಿಂದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಏತನ್ಮಧ್ಯೆ, ಕಮ್ರೂಪ್ ಜಿಲ್ಲೆಯ ರಂಗಿಯಾದಲ್ಲಿ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಏಳು ಮಂದಿಗೆ ಜಾಮೀನು ಸಿಕ್ಕಿದೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM), ರಂಗಿಯಾ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನೀಡಿದೆ ಎಂದು ವಕೀಲರು ತಿಳಿಸಿದ್ದಾರೆ. ದಿನದ ಅಂತ್ಯದ ವೇಳೆಗೆ ಇನ್ನೂ ಅನೇಕರಿಗೆ ಜಾಮೀನು ಸಿಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.