ಗುವಾಹಟಿ:ಬಿಜೆಪಿ ಕುಟುಂಬ ರಾಜಕಾರಣ ನಡೆಸುತ್ತಿದೆ ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ತರಾಟೆಗೆ ತೆಗೆದುಕೊಂಡಿದ್ದು, ಗಾಂಧಿ 'ಕುಟುಂಬ'ವೇ ರಾಜಕೀಯದಲ್ಲಿದೆ. ಈ ಬಗ್ಗೆ ಅರಿಯದ ರಾಹುಲ್ ಗಾಂಧಿ ಬಿಜೆಪಿ ಬಗ್ಗೆ ಮಾತನಾಡುತ್ತಾರೆ. ಅವರೊಬ್ಬ 'ಅಶಿಕ್ಷಿತ ವ್ಯಕ್ತಿ' ಎಂದು ಕಟುವಾಗಿ ಟೀಕಿಸಿದರು.
ವಂಶಾಡಳಿತದ ಮೂಲವೇ ಗಾಂಧಿ ಕುಟುಂಬ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ಶಾ ಬಿಜೆಪಿಯಲ್ಲಿ ಯಾವುದೇ ಸ್ಥಾನ ಪಡೆದಿಲ್ಲ. ಆದರೂ ರಾಹುಲ್ ಗಾಂಧಿ ಈ ಬಗ್ಗೆ ಟೀಕೆ ಮಾಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ ಶಾಸಕರಾಗಿದ್ದಾರೆ. ಗಾಂಧಿ ಕುಟುಂಬದಲ್ಲಿ ಎಷ್ಟು ಜನ ರಾಜಕೀಯದಲ್ಲಿದ್ದಾರೆ ಎಂಬುದು ರಾಹುಲ್ಗೆ ಗೊತ್ತಿಲ್ಲವೇ?. ಅವರ ಇಡೀ ಕುಟುಂಬ ರಾಜಕೀಯದಲ್ಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಿಜೆಪಿಯ ಭಾಗವೆಂದು ರಾಹುಲ್ ಭಾವಿಸಿದ್ದಾರೆ. ಇದೆಲ್ಲಾ ನೋಡಿದರೆ ರಾಹುಲ್ ಗಾಂಧಿ ಒಬ್ಬ 'ಅನಕ್ಷರಸ್ಥ' ಎಂದು ಅನಿಸುತ್ತದೆ ಎಂದರು.
ರಾಹುಲ್ ಗಾಂಧಿ ಹೊಸಬರಿಗೆ ಅವಕಾಶ ನೀಡಿ, ವಂಶಾಡಳಿತ ಬಗ್ಗೆ ಮಾತನಾಡಬೇಕು. ರಾಹುಲ್ ಅವರಿಗೆ ರಾಜಕೀಯದ ಬಗ್ಗೆ ಯಾವುದೇ ಜ್ಞಾನವಿಲ್ಲ. ರಾಹುಲ್ಗೂ ಮೊದಲು ಅಜ್ಜ, ಅಜ್ಜಿ, ಸಹೋದರ, ಸಹೋದರಿ, ತಾಯಿ ರಾಜಕೀಯದಲ್ಲಿದ್ದಾರೆ. ಪಕ್ಷವನ್ನು ನಿಯಂತ್ರಿಸುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿ ಅಂತಹ ಪದ್ಧತಿ ಇಲ್ಲ ಎಂದು ಅಸ್ಸಾಂ ಸಿಎಂ ಹೇಳಿದರು.
ರಾಹುಲ್ ಹೇಳಿದ್ದೇನು?:ಮಿಜೋರಾಂನಲ್ಲಿ ಬಿಜೆಪಿ ಕುಟುಂಬ ರಾಜಕಾರಣವನ್ನು ಟೀಕಿಸಿದ್ದ ರಾಹುಲ್ ಗಾಂಧಿ, ಅಮಿತ್ ಶಾ, ರಾಜನಾಥ್ ಸಿಂಗ್ ಅವರ ಪುತ್ರರು ಎಲ್ಲಿದ್ದಾರೆ ಎಂಬುದು ತಿಳಿಯಿರಿ. ಬಿಜೆಪಿಯ ನಾಯಕರ ಮಕ್ಕಳು ಹೇಗಿದ್ದಾರೆ. ಅವರ ಸ್ಥಾನವೇನು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಬಿಜೆಪಿಗರ ಮಕ್ಕಳು ರಾಜವಂಶದವರು ಎಂದು ರಾಹುಲ್ ಗಾಂಧಿ ಹೇಳಿದ್ದರು. ಅಮಿತ್ ಶಾ ಅವರ ಪುತ್ರ ಜಯ್ ಶಾ ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿದ್ದರೆ, ರಾಜನಾಥ್ ಸಿಂಗ್ ಅವರ ಪುತ್ರ ಉತ್ತರ ಪ್ರದೇಶದ ಶಾಸಕರಾಗಿದ್ದಾರೆ.
ಅಸ್ಸಾಂ ಸಿಎಂಗೆ ನೊಟೀಸ್:ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಉತ್ತರಾಖಂಡದ ರುದ್ರಪುರದ ನ್ಯಾಯಾಲಯವು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಬುಧವಾರ ನೊಟೀಸ್ ನೀಡಿದೆ. ಈ ನೊಟೀಸ್‌ಗೆ ನವೆಂಬರ್ 17ರೊಳಗೆ ಪ್ರತಿಕ್ರಿಯಿಸಲು ಸೂಚಿಸಲಾಗಿದೆ. ನವೆಂಬರ್ 18 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
2022 ರ ಉತ್ತರಾಖಂಡ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಹಿಮಂತ ಬಿಸ್ವಾ ಶರ್ಮಾ ಅವರು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಟೀಕಿಸಿದ್ದರು. ಈ ಕುರಿತ ವಿಚಾರಣೆ ನಡೆಸಲು ಕೋರ್ಟ್ ಈಗ ನೊಟೀಸ್ ಜಾರಿ ಮಾಡಿದೆ.
ಇದನ್ನೂ ಓದಿ:ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಕೊಲೆ ಕೇಸ್: 15 ವರ್ಷಗಳ ದೀರ್ಘ ಪ್ರಕರಣದ ತೀರ್ಪು ಪ್ರಕಟ, ಐವರು ಆರೋಪಿಗಳಿಗೆ ಶಿಕ್ಷೆ