ಅಸ್ಸೋಂ:ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದಾಗಿನಿಂದ ಈವರೆಗೆ 8.80 ಕೋಟಿ ರೂ. ನಗದು, 7.68 ಕೋಟಿ ರೂ. ಮೌಲ್ಯದ ಮದ್ಯ ಮತ್ತು 1.46 ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಅಸ್ಸೋಂ: 31.81 ಕೋಟಿ ರೂ. ಮೌಲ್ಯದ ವಸ್ತು ವಶಪಡಿಸಿಕೊಂಡ ಇಸಿ - ಅಸ್ಸೋಂ ಚುನಾವಣಾ ಆಯೋಗ
ಅಸ್ಸೋಂ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದಾಗಿನಿಂದ ಒಟ್ಟು 31.81 ಕೋಟಿ ರೂ. ಮೌಲ್ಯದ ನಗದು, ಮದ್ಯ ಸೇರಿದಂತೆ ಇತರೆ ವಸ್ತುಗಳನ್ನು ಇಸಿ ವಶಪಡಿಸಿಕೊಂಡಿದೆ.
ಅಸ್ಸೋಂನ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನಿತಿನ್ ಖಾಡೆ ಹೇಳಿಕೆಯ ಪ್ರಕಾರ, ಸುಮಾರು 10.18 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಹೆರಾಯಿನ್, ಗಾಂಜಾ ಮತ್ತು ಬ್ರೌನ್ ಶುಗರ್ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, 3.69 ಕೋಟಿ ರೂ. ಮೌಲ್ಯದ ವಿದೇಶಿ ಮೂಲದ ಸಿಗರೇಟ್, ಗಸಗಸೆ, ಕಾಂಟ್ರಾಬ್ಯಾಂಡ್ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಫೆಬ್ರವರಿ 26 ರಿಂದ ಮಾರ್ಚ್ 11 ರವರೆಗೆ ವಶಕ್ಕೆ ಪಡೆಯಲಾದ ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯ 31.81 ಕೋಟಿ ರೂಪಾಯಿಯಾಗಿದೆ.
ಫೆಬ್ರವರಿ 26 ರಂದು ಚುನಾವಣೆ ಘೋಷಣೆಯಾಗಿದೆ. ಅಂದಿನಿಂದ ಅಸ್ಸೋಂ ಪೊಲೀಸ್, ರಾಜ್ಯ ಅಬಕಾರಿ ಇಲಾಖೆ, ಆದಾಯ ತೆರಿಗೆ ಇಲಾಖೆ, ಕಂದಾಯ ಗುಪ್ತಚರ ನಿರ್ದೇಶನಾಲಯ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ಫ್ಲೈಯಿಂಗ್ ಸ್ಕ್ವಾಡ್ಸ್, ಸ್ಥಾಯಿ ಕಣ್ಗಾವಲು ತಂಡಗಳು ಮತ್ತು ಇತರ ನಿಯಂತ್ರಕ ಸಂಸ್ಥೆಗಳು ಅನುಮಾನಾಸ್ಪದ ಚಲನೆ, ಮದ್ಯ, ಬೆಲೆಬಾಳುವ ವಸ್ತುಗಳು, ಮಾದಕವಸ್ತುಗಳನ್ನು ಪತ್ತೆಹಚ್ಚಲು ಹಗಲಿರುಳು ಶ್ರಮಿಸುತ್ತಿವೆ ಎಂದು ನಿತಿನ್ ಖಾಡೆ ಹೇಳಿದ್ದಾರೆ.