ಗುವಾಹಟಿ (ಅಸ್ಸಾಂ): ನಗರದ ಜಲುಕ್ಬರಿ ಪ್ರದೇಶದಲ್ಲಿ ಇಂದು ಮುಂಜಾನೆ ರಸ್ತೆ ಅಪಘಾತ ಸಂಭವಿಸಿದ್ದು, ಅಸ್ಸಾಂ ಎಂಜಿನಿಯರಿಂಗ್ ಕಾಲೇಜಿನ ಏಳು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 6 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಗುವಾಹಟಿ ಜಂಟಿ ಪೊಲೀಸ್ ಕಮಿಷನರ್ ತುಬೆ ಪ್ರತೀಕ್ ವಿಜಯ್ ಕುಮಾರ್ ತಿಳಿಸಿದರು.
ತೃತೀಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮುಂಜಾನೆ ವಾಹನದಲ್ಲಿ ತಮ್ಮ ಕಾಲೇಜಿನಿಂದ ಹೊರಟಿದ್ದರು. ರಸ್ತೆ ಮಧ್ಯೆ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ವಾಹನ ಡಿವೈಡರ್ ದಾಟಿ ಎದುರಿನ ಲೇನ್‌ನಲ್ಲಿ ಸಾಗುತ್ತಿದ್ದಂತೆ ಗೂಡ್ಸ್ ಕ್ಯಾರಿಯರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಏಳು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರು. ಮೂವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್) ದಾಖಲಿಸಲಾಗಿದೆ.
ರಸ್ತೆ ಅಪಘಾತದ ನಂತರದ ದೃಶ್ಯಗಳು
ಗೂಡ್ಸ್ ಕ್ಯಾರಿಯರ್ ವಾಹನದಲ್ಲಿದ್ದ ಚಾಲಕ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು. ಮೃತ ವಿದ್ಯಾರ್ಥಿಗಳೆಲ್ಲರು ಅಸ್ಸಾಂ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರತಿಕ್ರಿಯಿಸಿ, ಜಲುಕ್ಬರಿ ಪ್ರದೇಶದಲ್ಲಿ ಸಂಭವಿಸಿದ ಅಪಘಾತದದಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದು ತೀವ್ರ ನೋವಾಗಿದೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲ ವೈದ್ಯಕೀಯ ಸಹಾಯ ಮಾಡುವಂತೆ ಸೂಚಿಸಿದ್ದೇನೆ ಎಂದು ಟ್ವೀಟ್‌ನಲ್ಲಿ ಮಾಡಿದ್ದಾರೆ.
ಇದನ್ನೂ ಓದಿ:ಕುಡಿದ ನಶೆಯಲ್ಲಿ ಸ್ನೇಹಿತರ ನಡುವೆ ಗಲಾಟೆ; ಓರ್ವನ ಕೊಲೆ