ಶ್ರೀನಗರ:ಇಲ್ಲಿನ ದಾಲ್ ಸರೋವರ ಮತ್ತು ಜಬರ್ವಾನ್ ಬೆಟ್ಟಗಳ ನಡುವೆ ಸುತ್ತುವರೆದಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಗಾರ್ಡನ್ ನಳನಳಿಸುತ್ತಿದೆ. ಅರಳಿ ನಿಂತಿರುವ ಟುಲಿಪ್ ಹೂಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. "ತೋಟಗಾರಿಕೆ, ಇಂಜಿನಿಯರಿಂಗ್, ಶಿಲೀಂಧ್ರ ನಾಶಕ ಚಿಕಿತ್ಸೆ, ಪೋಷಕಾಂಶಗಳ ಸಿಂಪಂಡಣೆ ಸೇರಿದಂತೆ ಸಣ್ಣ ಕಾರ್ಯಗಳು ನಡೆಯುತ್ತಿದೆ. ಮುಂದಿನ ವಾರ ಪ್ರವಾಸಿಗರಿಗೆ ಮುಕ್ತ ಅವಕಾಶಕ್ಕಾಗಿ ಸಿದ್ಧತೆ ನಡೆಯುತ್ತಿವೆ" ಎಂದು ಟುಲಿಪ್ ಉದ್ಯಾನದ ಉಸ್ತುವಾರಿ ಇನಾಮ್ ಉಲ್ ರೆಹಮಾನ್ ತಿಳಿಸಿದರು.
ಸಿರಾಜ್ ಬಾಗ್ ಎಂದೂ ಕರೆಯಲ್ಪಡುವ ಈ ಉದ್ಯಾನ ಮಾ.19 ರಿಂದ ಸಾರ್ವಜನಿಕರಿಗೆ ತೆರೆದಿರುತ್ತದೆ. ವಿವಿಧ ಬಣ್ಣಗಳ 1.5 ಮಿಲಿಯನ್ ಟುಲಿಪ್‌ಗಳಲ್ಲದೆ, ಇತರ ವಸಂತ ಹೂವುಗಳಾದ ಹಯಸಿಂತ್‌ಗಳು, ಡ್ಯಾಫಡಿಲ್‌ಗಳು, ಮಸ್ಕರಿ ಮತ್ತು ಸೈಕ್ಲಾಮೆನ್‌ಗಳನ್ನು ಒಳಗೊಂಡಿದೆ. ಪ್ರತಿ ವರ್ಷ ನಾವು ಈ ಉದ್ಯಾನವನ್ನು ವಿಸ್ತರಿಸುತ್ತೇವೆ ಮತ್ತು ಹೊಸ ಪ್ರಭೇದಗಳು ಇಲ್ಲಿವೆ. ಈ ವರ್ಷ ನಾವು ಕಾರಂಜಿ ಚಾನಲ್ ಅನ್ನು ವಿಸ್ತರಿಸಿದ್ದೇವೆ. ಇದು ಪ್ರಪಂಚದಾದ್ಯಂತ ತೋಟಗಾರಿಕೆ ವೃತ್ತಿಪರತೆಗೆ ಉದಾಹರಣೆಯಾಗಬೇಕು ಎಂದು ರೆಹಮಾನ್ ಹೇಳಿದರು.
ಈ ವರ್ಷ ಹಳದಿ, ಕೆಂಪು, ಕಡುಗೆಂಪು, ನೇರಳೆ ಮತ್ತು ಬಿಳಿ ಬಣ್ಣಗಳ ಟುಲಿಪ್ ಹೂಗಳಿವೆ. "ಜಬರ್ವಾನ್ ಪರ್ವತಗಳ ನೆರಳು ಈ ಉದ್ಯಾನಕ್ಕೆ ಉತ್ತಮ ವಾತಾವರಣವನ್ನು ನೀಡುತ್ತದೆ. ಅದಕ್ಕಾಗಿಯೇ ಜನರು ಈ ಉದ್ಯಾನವನ್ನು ಇಷ್ಟಪಡುತ್ತಾರೆ. ಕಳೆದ ವರ್ಷ ಎರಡು ಲಕ್ಷ ಪ್ರವಾಸಿಗರು ಬಂದಿದ್ದರು. ಈ ಬಾರಿ ಅದಕ್ಕೂ ಹೆಚ್ಚು ಜನ ಬರುವ ನಿರೀಕ್ಷೆಯಿದೆ" ಎಂದು ಉದ್ಯಾನದ ಮೇಲ್ವಿಚಾರಕ ಮುಷ್ತಾಕ್ ಅಹ್ಮದ್ ಮಿರ್ ಹೇಳಿದರು.