ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಣಿವೆಗಳ ರಾಜ್ಯದಲ್ಲಿ ಹರಿಯುವ ಹತ್ತಾರು ನದಿಗಳು ವೈವಿದ್ಯಮಯ ಜೀವಸಂಕುಲದ ಆವಾಸ ಸ್ಥಾನವಾಗಿದೆ. ಇಲ್ಲಿ ಗಾಜಿನಂತೆ ಹೊಳೆಯುವ ಪರಿಶುದ್ಧ ನೀರು ಹರಿಯುವುದು ಸಾಮಾನ್ಯವಾಗಿದೆ. ಆದರೆ, ಇಂತಹ ಹಲವು ನದಿಗಳಲ್ಲಿ ವಿಶಿಷ್ಟ ಪ್ರಭೇದದ ಮೀನುಗಳು ಕಂಡು ಬರುತ್ತವೆ. ದೇಶದ ಬೇರೆ ಯಾವುದೇ ಭಾಗದಲ್ಲಿ ಕಂಡು ಬರದ ಮೀನುಗಳು ಇಲ್ಲಿ ಮಾತ್ರ ಕಾಣಸಿಗುತ್ತವೆ. ಇದಕ್ಕೆ ಬಹುಮುಖ್ಯ ಕಾರಣ ಈ ಮೀನುಗಳ ಸಂತಾನೋತ್ಪತ್ತಿಗೆ ಬೇಕಾದ ವಿಶಿಷ್ಟ ಹವಮಾನ ಇಲ್ಲಿ ಅಡಗಿದೆ.
ಈ ವಿಶಿಷ್ಟ ಮೀನುಗಳ ಪೈಕಿ ರೈನ್ಬೋ ಟ್ರೌಟ್ ಜಾತಿಯ ಮೀನು ಹೆಚ್ಚಾಗಿ ಕಂಡು ಬರುತ್ತದೆ. ವಿಶೇಷ ಅಂದ್ರೆ ಈ ಮೀನುಗಳು ವಿಭಿನ್ನ ಮಾದರಿಯ ಪರಿಮಳ ಹೊರ ಸೂಸುತ್ತವೆ. 1889ರಲ್ಲಿ ಬ್ರಿಟಿಷ್ ನಿವಾಸಿ ಫ್ರಾಂಕ್ ಜಾನ್ ಮಿಚೆಲ್ ಮೊದಲ ಬಾರಿಗೆ ಈ ಮೀನಿಗೆ ಟ್ರೌಟ್ ಫಿಶ್ ಎಂದು ಹೆಸರಿಸಿದ್ದ ಎನ್ನಲಾಗುತ್ತದೆ. ಇದಲ್ಲದೇ ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಏಷ್ಯಾದ ಅತೀ ದೊಡ್ಡ ಟ್ರೌಟ್ ಫಿಶ್ ಸಾಕಣೆ ಕೇಂದ್ರವಿದೆ. ಸುಮಾರು 38 ಎಕರೆ ಪ್ರದೇಶ ವಿಸ್ತಾರವಾಗಿರುವ ಈ ಸಾಕಣೆ ಕೇಂದ್ರದಲ್ಲಿ ಲಕ್ಷಾಂತರ ಮೀನುಗಳು ಬೆಳೆಯುತ್ತಿವೆ.
ಈ ಸಂತಾನೋತ್ಪತ್ತಿ ಕೇಂದ್ರವನ್ನು ಯುರೋಪಿಯನ್ ಕಂಪನಿಯ ಸಹಯೋಗದೊಂದಿಗೆ 1984ರಲ್ಲಿ ಸ್ಥಾಪಿಸಲಾಯಿತು. ಇದನ್ನು ಈಗ ಏಷ್ಯಾದ ಅತಿದೊಡ್ಡ ಟ್ರೌಟ್ ಮೀನು ಫಾರ್ಮ್ ಎಂದು ಪರಿಗಣಿಸಲಾಗಿದೆ.