ನವದೆಹಲಿ: ಫೆಬ್ರವರಿ 4 ರಂದು ನಡೆಯಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತುರ್ತು ಸಭೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಗಳ ಮಧ್ಯೆ ತೀವ್ರ ಜಟಾಪಟಿ ನಡೆಯುವ ಸಾಧ್ಯತೆಯಿದೆ. 2023ರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕ್ಯಾಲೆಂಡರ್ ಅನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಣೆ ಮಾಡಿರುವ ಕುರಿತಾಗಿ ಈ ಜಟಾಪಟಿ ನಡೆಯಬಹುದು. ತಮ್ಮ ಜೊತೆಗೆ ಯಾವುದೇ ಚರ್ಚೆ ನಡೆಸದೇ ಏಕಪಕ್ಷೀಯವಾಗಿ ಕ್ಯಾಲೆಂಡರ್ ನಿರ್ಧರಿಸಲಾಗಿದೆ ಎಂದು ಪಿಸಿಬಿ ಆರೋಪಿಸಿದೆ. ಜಯ್ ಶಾ ಏಶಿಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರೂ ಆಗಿರುವುದು ಗಮನಾರ್ಹ.
ಮೂಲಗಳ ಪ್ರಕಾರ, ಪಿಸಿಬಿಯು ತುರ್ತು ಎಸಿಸಿ ಮಂಡಳಿ ಸಭೆ ನಡೆಸುವಂತೆ ಕೋರಿದ್ದು, ಮುಂದಿನ ತಿಂಗಳು ಈ ಸಭೆ ನಡೆಯಲಿದೆ ಎಂದು ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಘೋಷಿಸಿದ್ದಾರೆ. ಕೆಲ ಸಮಯದಿಂದ ಎಸಿಸಿ ಮಂಡಳಿಯ ಸಭೆ ನಡೆದಿಲ್ಲ ಮತ್ತು ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇಂತಹ ಒಂದು ನಿರ್ಧಾರವನ್ನು ನಾವು ಪ್ರಶ್ನಿಸಿದ್ದೇವೆ ಎಂದು ಸೇಥಿ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಬೋರ್ಡ್ ಮೀಟಿಂಗ್ ನಡೆಸುವಂತೆ ನಾವು ಅವರನ್ನು ಮನವೊಲಿಸಲು ಸಫಲರಾಗಿದ್ದೇವೆ ಮತ್ತು ನಾನು ಅದರಲ್ಲಿ ಭಾಗವಹಿಸುತ್ತಿರುವುದು ಒಳ್ಳೆಯ ಸುದ್ದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ 2023 ರಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯು ಎರಡೂ ದೇಶಗಳ ಮಧ್ಯದ ವಿವಾದದ ಕೇಂದ್ರ ಬಿಂದುವಾಗಿದೆ. ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಾಧ್ಯವಾಗದ ಕಾರಣ ಪಂದ್ಯಾವಳಿಯನ್ನು ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಶಾ ಹೇಳಿದ್ದಾರೆ. ಇದಕ್ಕೆ ಅಂದಿನ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವರ್ಷದ ಕೊನೆಯಲ್ಲಿ ಏಕದಿನ ವಿಶ್ವಕಪ್‌ಗಾಗಿ ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ರಮೀಜ್ ಹೇಳಿದ್ದರು.