ವಾರಣಾಸಿ (ಉತ್ತರಪ್ರದೇಶ):ಇಲ್ಲಿನ ಹೈಕೋರ್ಟ್ ಆದೇಶದ ಬಳಿಕ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಕ್ಯಾಂಪಸ್‌ನ ಸಮೀಕ್ಷಾ ಕಾರ್ಯ ಆಗಸ್ಟ್ 4ರಿಂದ ಪ್ರಾರಂಭವಾಗಿತ್ತು. ಇದೀಗ ಸಮೀಕ್ಷೆ ನಡೆಸುತ್ತಿದ್ದ ಎಎಸ್‌ಐ (ಪ್ರಾಚ್ಯ ಮತ್ತು ಪುರಾತತ್ವ ಇಲಾಖೆ) ತಂಡ ವರದಿ ಸಿದ್ಧತೆಗಾಗಿ ತಮ್ಮ ಸರ್ವೆ ಕಾರ್ಯದ ಸಮಯವನ್ನು ಕಡಿತಗೊಳಿಸಿದೆ.
ಜ್ಞಾನವಾಪಿ ಹಿಂದೂ ಮಂದಿರವೋ, ಮಸೀದಿಯೋ ಎಂಬ ವಿವಾದಕ್ಕೆ ಸಂಬಂಧಪಟ್ಟಂತೆ ಜುಲೈ 21ರಂದು ವಾರಣಾಸಿ ಜಿಲ್ಲಾ ನ್ಯಾಯಾಧೀಶ ಡಾ.ಅಜಯ್‌ಕೃಷ್ಣ ವಿಶ್ವೇಶ್ ಅವರು, ಜ್ಞಾನವಾಪಿ ಆವರಣದ ಸಮೀಕ್ಷೆಗೆ ಆದೇಶಿಸಿದ್ದರು. ಈ ಆದೇಶದಂತೆ ಜುಲೈ 24ರಿಂದ ಸಮೀಕ್ಷೆ ಪ್ರಕ್ರಿಯೆ ಪ್ರಾರಂಭವಾಗಿತ್ತು. ಮೊದಲ ದಿನ ಸಮೀಕ್ಷೆಯನ್ನು ತಜ್ಞರ ತಂಡವು ಮಧ್ಯಾಹ್ನ 12.00 ರಿಂದ 3.00ರ ವರೆಗೆ ನಡೆಸಿತ್ತು. ಇದಾದ ಬಳಿಕ ಸಮೀಕ್ಷಾ ಕಾರ್ಯ ಸ್ಥಗಿತಗೊಳಿಸಿತ್ತು. ಅಲಹಾಬಾದ್ ಹೈಕೋರ್ಟ್ ಆದೇಶದ ನಂತರ, ಆಗಸ್ಟ್ 4ರಿಂದ ಜ್ಞಾನವಾಪಿ ಕ್ಯಾಂಪಸ್‌ನಲ್ಲಿ ಮತ್ತೆ ಸರ್ವೆ ಕಾರ್ಯ ಪ್ರಾರಂಭವಾಗಿತ್ತು. ಅಂದಿನಿಂದ ಇಂದಿನವರೆಗೆ ಸಮೀಕ್ಷೆ ಸಮಯ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ನಡೆದಿತ್ತು. ಆದರೆ ಇದೀಗ ಭಾರತೀಯ ಪುರಾತತ್ವ ಇಲಾಖೆಯ ತಂಡ ವರದಿ ಸಿದ್ಧಪಡಿಸುವಲ್ಲಿ ನಿರತವಾಗಿದೆ. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಸರ್ವೆ ಕಾರ್ಯದ ವರದಿಯನ್ನು ಮಂಡಿಸಲು ಸಿದ್ಧತೆ ನಡೆಸುತ್ತಿದೆ. ಹೀಗಾಗಿ ಇಂದಿನಿಂದ ಎಎಸ್‌ಐ ತಂಡ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಸಮೀಕ್ಷೆ ನಡೆಸಬೇಕಿದೆ.