ಅಮರಾವತಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅಚಲಪುರ ತಾಲೂಕಿನಲ್ಲೊಂದು ವಿಶಿಷ್ಟ ಬಾವಿಯಿದೆ. ಈ ತಾಲೂಕಿನ ಶ್ರೀ ಕ್ಷೇತ್ರ ಅಷ್ಟಮಸಿದ್ಧಿಯಲ್ಲಿರುವ ಚಿಕ್ಕ ಬಾವಿಯೊಂದರ ನೀರಿನಲ್ಲಿ ಶಿಶುಗಳಿಗೆ ಸ್ನಾನ ಮಾಡಿಸಿದರೆ ಶಿಶುಗಳಿಗೆ ಅನೇಕ ರೋಗಗಳು ಬರುವುದಿಲ್ಲ ಎಂಬ ನಂಬಿಕೆ ಇದೆ. ಇದರಿಂದಾಗಿ ಈ ಬಾವಿಯಲ್ಲಿ ಶಿಶುಗಳಿಗೆ ಸ್ನಾನ ಮಾಡಿಸಲು ಜನ ಬರುತ್ತಲೇ ಇರುತ್ತಾರೆ. ಮಕ್ಕಳೊಂದಿಗೆ ಎಲ್ಲರೂ ಈ ಬಾವಿಯ ನೀರಿನಲ್ಲಿ ಸ್ನಾನ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ಕಾರಣಕ್ಕೆ ಅಮರಾವತಿ ಜಿಲ್ಲೆ ಮಾತ್ರವಲ್ಲದೇ ವಿದರ್ಭದ ಬಹುತೇಕ ಎಲ್ಲ ಜಿಲ್ಲೆಗಳಿಂದ ಜನ ಈ ಬಾವಿಯ ನೀರಿನಲ್ಲಿ ಸ್ನಾನ ಮಾಡಲು ನಿತ್ಯವೂ ಆಗಮಿಸುತ್ತಾರೆ.
ಅದರಲ್ಲೂ ಮಂಗಳವಾರ ಮತ್ತು ಶುಕ್ರವಾರ ಅತಿ ಹೆಚ್ಚು ಜನಸಂದಣಿ ಇಲ್ಲಿರುತ್ತದೆ. ಅಷ್ಟಮಸಿದ್ಧಿಯ ಬಾವಿಯ ನೀರಿನಲ್ಲಿ ಮಂಗಳವಾರ ಮತ್ತು ಶುಕ್ರವಾರದಂದು ಸ್ನಾನ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಜನ ನಂಬಿರುವುದರಿಂದ ಈ ಎರಡು ದಿನ ಜನತೆ ತಂಡೋಪತಂಡವಾಗಿ ಆಗಮಿಸುತ್ತಾರೆ.
ವೀಳ್ಯದೆಲೆ ಕರ್ಪೂರ ಸುಡುವ ಸಂಪ್ರದಾಯ:ಅಷ್ಟಮಸಿದ್ಧಿಗೆ ಬರುವ ಜನರಿಗೆ ಕಡಿಮೆ ದರದಲ್ಲಿ ಬಾವಿಯಿಂದ ನೀರು ಸೇದಲು ಹಗ್ಗ, ಬಕೆಟ್ ಗಳನ್ನು ಬಾಡಿಗೆಗೆ ನೀಡುವುದು ಇಲ್ಲಿನ ಸಂಪ್ರದಾಯ. ಪುಟ್ಟ ಶಿಶುಗಳಿಗೆ ಸ್ನಾನ ಮಾಡಿಸಲು ಮೊದಲ ಬಾರಿಗೆ ಬಾವಿಯಿಂದ ನೀರು ಸೇದುವಾಗ ಕರ್ಪೂರವನ್ನು ಬಕೆಟ್‌ನಲ್ಲಿ ವೀಳ್ಯದೆಲೆಯಿಂದ ಸುಟ್ಟು, ಕರ್ಪೂರ ಉರಿಯುತ್ತಿರುವಾಗ ಬಕೆಟ್ ಅನ್ನು ಹಗ್ಗದ ಸಹಾಯದಿಂದ ಬಾವಿಯ ನೀರಿಗೆ ಬೀಳಿಸುತ್ತಾರೆ. ಇದರ ನಂತರ, ಈ ಬಕೆಟ್‌ನಿಂದ ನೀರನ್ನು ಸೇದಿ ಈ ನೀರನ್ನು ಶಿಶುಗಳ ದೇಹದ ಮೇಲೆ ಸುರಿಯಲಾಗುತ್ತದೆ. ಹಲವು ವರ್ಷಗಳಿಂದ ಇಲ್ಲಿ ಈ ಪದ್ಧತಿ ಜಾರಿಯಲ್ಲಿದೆ.
ಮಗು ಸದಾ ಕಿರಿಕಿರಿ ಮಾಡ್ತಿದ್ದರೆ ಇಲ್ಲೊಂದ್ಸಲ ಕರ್ಕೊಂಡೋಗಿ:ಸದಾ ಕಿರಿಕಿರಿ ಮಾಡುವ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಶಿಶುಗಳಿಗೆ ಈ ಸ್ಥಳದಲ್ಲಿ ಮಂತ್ರ ಹೇಳಲಾಗುತ್ತದೆ. ಮಂತ್ರದ ಭಾಗವಾಗಿ ಈ ಸ್ಥಳದಲ್ಲಿ ಕುಂಬಳಕಾಯಿ ಹರಿ ಬಿಡಲಾಗುತ್ತದೆ. ಕುಂಬಳಕಾಯಿ ಹೊತ್ತೊಯ್ಯುವುದರಿಂದ ತಮ್ಮ ಮಕ್ಕಳು ಕೂಡ ಕುಂಬಳಕಾಯಿಯಂತೆ ಆರೋಗ್ಯವಾಗಿರುತ್ತವೆ ಎಂದು ಅನೇಕ ಭಕ್ತರು ನಂಬುತ್ತಾರೆ.