ನವದೆಹಲಿ:ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಿಂದ ಹಿಂದೆ ಸರಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಪಕ್ಷದ ಹಿರಿಯ ನಾಯಕ, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಗೆಹ್ಲೋಟ್, ಮಲ್ಲಿಕಾರ್ಜುನ್ ಖರ್ಗೆ ಅವರು ಅನುಭವಿಗಳು. ಒಳ್ಳೆಯ ಹೃದಯವುಳ್ಳವರು. ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಬೇಕು. ಅವರ ಹಿರಿತನದ ಅನುಭವ ಪಕ್ಷಕ್ಕೆ ಅಗತ್ಯವಾಗಿದೆ. ಶಶಿ ತರೂರ್ ಅವರು ಕೂಡ ಒಳ್ಳೆಯ ವ್ಯಕ್ತಿ. ಆದರೆ, ಖರ್ಗೆಯವರು ಪಕ್ಷದಲ್ಲಿ ಸುದೀರ್ಘವಾಗಿ ಜೀವನ ಸವೆದಿದ್ದಾರೆ. ರಾಜಕೀಯದ ಮಹತ್ತರ ಅನುಭವ ಹೊಂದಿದ್ದಾರೆ. ಚುನಾವಣೆಯಲ್ಲಿ ಖರ್ಗೆ ಅವರನ್ನು ಏಕಪಕ್ಷೀಯವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್ ಅವರನ್ನು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವಂತೆ ಸ್ವತಃ ಗಾಂಧಿ ಕುಟುಂಬವೇ ಕೇಳಿಕೊಂಡಿತ್ತು. ಚುನಾವಣೆಗೆ ಸ್ಪರ್ಧಿಸಿದಲ್ಲಿ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿತ್ತು. ಆದರೆ, ರಾಜಸ್ಥಾನದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನಿಂದಾಗಿ ಅವರು ಕಣದಿಂದ ಹಿಂದೆ ಸರಿದರು.