ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸುವೆ: ಅಶೋಕ್ ಗೆಹ್ಲೋಟ್ ಸ್ಪಷ್ಟನೆ - ಕಾಂಗ್ರೆಸ್​ ಅಧ್ಯಕ್ಷೀಯ ರೇಸ್​

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗುರುವಾರ ಖಚಿತಪಡಿಸಿದ್ದಾರೆ. ತಾವು ಎಂದಿಗೂ ರಾಜಸ್ಥಾನದಿಂದ ದೂರ ಉಳಿಯುವುದಿಲ್ಲ ಮತ್ತು ರಾಜ್ಯಕ್ಕಾಗಿ ಕೆಲಸ ಮಾಡುತ್ತೇನೆಂದು ಇದೇ ವೇಳೆ ಸ್ಪಷ್ಟಪಡಿಸಿದರು.

Ashok Gehlot
ಸಿಎಂ ಅಶೋಕ್ ಗೆಹ್ಲೋಟ್

By

Published : Sep 23, 2022, 9:16 AM IST

ಕೊಚ್ಚಿ/ನವದೆಹಲಿ:ಕಾಂಗ್ರೆಸ್ ಪಕ್ಷದರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೆ.28 ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗಾಗಿ ನಡೆಯುತ್ತಿರುವ ಹಗ್ಗಜಗ್ಗಾಟದ ನಡುವೆಯೇ ಸಿಎಂ ಅಶೋಕ್ ಗೆಹ್ಲೋಟ್ ಗುರುವಾರ ಕೊಚ್ಚಿ ತಲುಪಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು.

ಈ ವೇಳೆ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಗೆಹ್ಲೋಟ್, ನಾನು ನಾಮಪತ್ರ ಸಲ್ಲಿಸುತ್ತೇನೆ, ನಂತರ ಇತರ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಇದೆಲ್ಲವೂ ಭವಿಷ್ಯದ ಮೇಲೆ ಅವಲಂಬಿತವಾಗಿದೆ. ನಾನು ಕಾಂಗ್ರೆಸ್ಸಿನ ಸಿಪಾಯಿ, ಪಕ್ಷ ಏನು ಹೇಳುತ್ತದೆಯೋ ಆ ಕೆಲಸವನ್ನು ಮಾಡಬೇಕು. ಇದು ನನ್ನ ನಿಲುವು ಎಂದು ಹೇಳಿದರು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಸಂವಿಧಾನವನ್ನು ಗಾಳಿಗೆ ತೂರಲಾಗುತ್ತಿದೆ. ಅಂತಹ ಸಮಯದಲ್ಲಿ, ಪ್ರಬಲ ಪ್ರತಿಪಕ್ಷದ ಪಾತ್ರವು ಹೆಚ್ಚು ಮಹತ್ವದ್ದಾಗಿದೆ. ಮತ್ತು ಕಾಂಗ್ರೆಸ್ ಮಾತ್ರ ಅಂತಹ ಪಾತ್ರವನ್ನು ವಹಿಸುತ್ತದೆ. ಅದಕ್ಕಾಗಿಯೇ ನಾವೆಲ್ಲರೂ ರಾಹುಲ್ ಗಾಂಧಿಯ ನೇತೃತ್ವವನ್ನು ಬಯಸುತ್ತೇವೆಂದು ಅಶೋಕ್ ಗೆಹ್ಲೋಟ್ ತಿಳಿಸಿದರು.

ಪ್ರದೇಶ ಕಾಂಗ್ರೆಸ್ ಸಮಿತಿಗಳು ಬಯಸಿದಂತೆ ಪಕ್ಷದ ಅಧ್ಯಕ್ಷರ ಸ್ಥಾನವನ್ನು ವಹಿಸಿಕೊಳ್ಳುವಂತೆ ಮತ್ತೊಮ್ಮೆ ರಾಹುಲ್‌ಗೆ ಮನವಿ ಮಾಡುವುದಾಗಿ ತಿಳಿಸಿದ ಅವರು, "ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಗಳು ಅವರನ್ನು ಪಕ್ಷದ ಅಧ್ಯಕ್ಷರಾಗಲು ಕೋರಿ ನಿರ್ಣಯ ಅಂಗೀಕಾರ ಮಾಡುತ್ತಿವೆ. ಅವರು ಅದನ್ನು ಒಪ್ಪಿಕೊಳ್ಳಬೇಕು" ಎಂದು ನಾವು ರಾಹುಲ್‌ಗೆ ವಿನಂತಿಸುತ್ತೇವೆ. ನಾನು ನಿರ್ದಿಷ್ಟವಾಗಿ ಯಾರ ಬಗ್ಗೆಯೂ ಕಮೆಂಟ್ ಮಾಡಲು ಬಯಸುವುದಿಲ್ಲ. ರಾಜಸ್ಥಾನದಲ್ಲಿ ಯಾವ ಪರಿಸ್ಥಿತಿ ಎದುರಾಗುತ್ತದೆ, ಕಾಂಗ್ರೆಸ್ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಮತ್ತು ರಾಜಸ್ಥಾನದ ಶಾಸಕರು ಏನು ಯೋಚಿಸುತ್ತಾರೆ ಎಂಬುದನ್ನು ಕಾಯ್ದು ನೋಡೋಣ ಎಂದು ಹೇಳಿದರು.

ರಾಹುಲ್​​ ಪರ ಪಕ್ಷದಲ್ಲಿ ಹೆಚ್ಚಿದ ಕೂಗು:ಅಶೋಕ್ ಗೆಹ್ಲೋಟ್ ಅವರು ಉನ್ನತ ಹುದ್ದೆಗೆ ನಾಮಪತ್ರ ಸಲ್ಲಿಸುವುದಾಗಿ ಖಚಿತಪಡಿಸುವುದರೊಂದಿಗೆ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ರೇಸ್ ಬಿಸಿಯಾಗಿದೆ. ಆದರೆ, ಸಂಸದ ಶಶಿ ತರೂರ್ ಕೂಡ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸೋನಿಯಾ ಗಾಂಧಿಯವರ ಒಪ್ಪಿಗೆ ಪಡೆದಿದ್ದಾರೆ. ಏತನ್ಮಧ್ಯೆ, ವಯನಾಡ್ ಸಂಸದರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಮರಳಿ ತರಲು ಏಳು ರಾಜ್ಯ ಘಟಕಗಳು ನಿರ್ಣಯಗಳನ್ನು ಅಂಗೀಕರಿಸುವುದರೊಂದಿಗೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ನ ಆಡಳಿತವನ್ನು ವಹಿಸಿಕೊಳ್ಳಬೇಕೆಂಬ ಕೂಗು ಹೆಚ್ಚುತ್ತಿದೆ.

ಇದನ್ನೂ ಓದಿ:ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ಚುನಾವಣೆಗೆ ಅಧಿಸೂಚನೆ: ರೇಸ್​​ನಲ್ಲಿ ದಿಗ್ವಿಜಯ್ ಸಿಂಗ್

ಗೆಹ್ಲೋಟ್ ಲೆಕ್ಕಾಚಾರ ಉಲ್ಟಾ?:ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಎಐಸಿಸಿ ಅಧ್ಯಕ್ಷ ಸ್ಥಾನವೂ ಇರಲಿ, ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನವೂ ನನಗೆ ಇರಲಿ ಅಂತಾ ಯೋಚಿಸುತ್ತಿದ್ದ ಅಶೋಕ್ ಗೆಹ್ಲೋಟ್ ಲೆಕ್ಕಾಚಾರ ಉಲ್ಟಾ ಹೊಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷ ಚುನಾವಣೆೆಯಲ್ಲಿ ಗೆದ್ದವರು ಎರಡು ಸ್ಥಾನಗಳಲ್ಲಿ ಮುಂದುವರಿಯುವುದಕ್ಕೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಈಗಾಗಲೇ ಖಡಕ್ ಸಂದೇಶವನ್ನು ರವಾನಿಸಿದ್ದಾರೆ. ಹೀಗಾಗಿ, ರಾಜಸ್ಥಾನ ಸಿಎಂ ಸ್ಥಾನ ಸಚಿನ್​ ಪೈಲಟ್ ಸೇರಿದಂತೆ ಇತರರ ಪಾಲಾಗುವ ಸಾಧ್ಯತೆ ದಟ್ಟವಾಗಿದೆ.

ಒಬ್ಬ ವ್ಯಕ್ತಿ, ಒಂದು ಹುದ್ದೆ ಚರ್ಚೆ: "ಒಬ್ಬ ವ್ಯಕ್ತಿ, ಒಂದು ಹುದ್ದೆ" ನಿಯಮ ಅಶೋಕ್ ಗೆಹ್ಲೋಟ್‌ಗೆ ಅನ್ವಯಿಸುತ್ತದೆಯೇ ಎಂಬ ಪ್ರಶ್ನೆಗೆ ಕೇರಳದಲ್ಲಿ ರಾಹುಲ್ ಗಾಂಧಿ ಉತ್ತರಿಸಿದರು. "ನಾವು ಬದ್ಧತೆಯನ್ನು ಹೊಂದಿದ್ದು, ಅದನ್ನು ಉಳಿಸಿಕೊಳ್ಳುತ್ತೇವೆ ಎಂದರು.

  • 71 ವರ್ಷ ವಯಸ್ಸಿನ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರಾಗಲಿ ಎನ್ನುವುದು ರಾಹುಲ್ ಗಾಂಧಿ ಆಯ್ಕೆಯಾಗಿದೆ. ಆದರೆ, ಅವರು ಆಯ್ಕೆಯಾದರೆ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ ಎಂಬ ಆತಂಕದಿಂದ ಅವರು ಇಲ್ಲಿಯವರೆಗೆ ಹೊರಗುಳಿದಿದ್ದಾರೆ.
  • ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷರಾದರೆ, 2020ರಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉರುಳಿಸುವ ಮಟ್ಟಕ್ಕೆ ತಲುಪಿದ್ದ ಸಚಿನ್ ಪೈಲಟ್ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗುವ ನಿರೀಕ್ಷೆಯಿದೆ.
  • ಕೇರಳದಲ್ಲಿ ನಡೆಯುತ್ತಿರುವ 'ಭಾರತ್ ಜೋಡೋ' ಯಾತ್ರೆಯಲ್ಲಿ ಗುರುವಾರ ರಾಹುಲ್ ಗಾಂಧಿ ಜೊತೆಗೆ ಅದೇ ಸಚಿನ್ ಪೈಲಟ್ ಹೆಜ್ಜೆ ಹಾಕಿದರು. ಗೆಹ್ಲೋಟ್ ಆಗಮಿಸುವುದಕ್ಕೂ ಕೆಲವು ಗಂಟೆಗಳ ಮೊದಲು ಯಾತ್ರೆಯಿಂದ ಅವರು ತೆರಳಿದ್ದರು.
  • ಅಕ್ಟೋಬರ್ 17ರ ಚುನಾವಣೆಗೆ ಸೋಮವಾರ ತಮ್ಮ ನಾಮಪತ್ರ ಸಲ್ಲಿಸುವ ಮೊದಲು ಕಾಂಗ್ರೆಸ್ ಅಧ್ಯಕ್ಷರಾಗಿ ಮರಳಲು ರಾಹುಲ್ ಗಾಂಧಿ ಮನವೊಲಿಸಲು "ಕೊನೆಯ ಬಾರಿಗೆ" ಪ್ರಯತ್ನಿಸುವುದಾಗಿ ಅಶೋಕ್ ಗೆಹ್ಲೋಟ್ ಹೇಳಿದ್ದರು.
  • ತಮ್ಮ ನಿರ್ಧಾರಕ್ಕೆ ಬದ್ಧವಾಗಿರುವ ಬಗ್ಗೆ ಸಂಸದ ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು. ಗುರುವಾರ ಸಂಜೆ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಅಶೋಕ್ ಗೆಹ್ಲೋಟ್ ಭೇಟಿಯಾದರು.
  • ಒಬ್ಬರು ಸಚಿವರಾಗಿ ಉಳಿಯಬಹುದು ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಿಯೂ ಆಯ್ಕೆಯಾಗಬಹುದು, ಪಕ್ಷಕ್ಕೆ ಅನುಕೂಲವಾಗುವ ಯಾವುದನ್ನಾದರೂ ನಾನು ಮಾಡುತ್ತೇನೆ, ಒಂದು ಹುದ್ದೆ, ಎರಡು ಹುದ್ದೆ ಅಥವಾ ಮೂರು ಹುದ್ದೆ, ನಾನು ಹಿಂದೆ ಸರಿಯುವುದಿಲ್ಲ ಎಂದು ಸಭೆಗೂ ಮೊದಲು ಅಶೋಕ್ ಗೆಹ್ಲೋಟ್ ಹೇಳಿದ್ದರು.
  • ಸೋನಿಯಾ ಗಾಂಧಿ ಭೇಟಿಯ ನಂತರ, ಹಿರಿಯ ನಾಯಕ ಕೆ.ಸಿ ವೇಣುಗೋಪಾಲ್, "ಒಬ್ಬ ವ್ಯಕ್ತಿ ಒಂದು ಹುದ್ದೆ" ನಿಯಮದ ಕುರಿತು ಹೇಳಿದರು.
  • "ಯಾರು ಸ್ಪರ್ಧಿಸುತ್ತಾರೆ ಮತ್ತು ಗೆಲ್ಲುತ್ತಾರೆ ಎಂಬುದರ ಆಧಾರದ ಮೇಲೆ ಇದು ಅನ್ವಯಿಸುತ್ತದೆ." ಆದರೆ ರಾಹುಲ್ ಗಾಂಧಿಯವರ ಕಟ್ಟುನಿಟ್ಟಿನ ಸಂದೇಶವು ಯಾವುದೇ ಅನುಮಾನಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ:ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಸೆಪ್ಟೆಂಬರ್ 24 ರಿಂದ 30 ರವರೆಗೆ ನಡೆಯಲಿದೆ. ಅಕ್ಟೋಬರ್ 1ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನಾಂಕವಾಗಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಲ್ಲಿ ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಸಹ ಹೊರಬೀಳಲಿದೆ.

ಇದನ್ನೂ ಓದಿ:ರಾಹುಲ್​ ಗಾಂಧಿ ಪಕ್ಷದ ಅಧ್ಯಕ್ಷರಾಗಬೇಕು, ಇಲ್ಲದಿದ್ದರೆ ದೇಶಾದ್ಯಂತ ಕಾರ್ಯಕರ್ತರಿಗೆ ನಿರಾಶೆ: ಸಿಎಂ ಗೆಹ್ಲೋಟ್​

ABOUT THE AUTHOR

...view details