ನವದೆಹಲಿ: ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅಜಯ್ ವಿಷ್ಣೋಯಿ ಅವರು ಮೇನಕಾ ಗಾಂಧಿ ವಿರುದ್ಧ ಟ್ವಿಟರ್ನಲ್ಲಿ ಹರಿಹಾಯ್ದಿದ್ದಾರೆ. ಆಕೆ ತಮ್ಮ ಪಕ್ಷದ ಸಂಸದೆ ಎಂದು ಹೇಳಿಕೊಳ್ಳೋದಕ್ಕೆ ನನಗೆ ನಾಚಿಕೆ ಎನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶು ವೈದ್ಯರ ವಿರುದ್ಧ ಮೇನಕಾ ಗಾಂಧಿ ಬಳಕೆ ಮಾಡಿರುವ ಶಬ್ಧಗಳು ಸೂಕ್ತವಾಗಿಲ್ಲ. ಇದು ನಾಚಿಕೆಗೇಡಿನ ವರ್ತನೆ, ಮೇನಕಾ ಗಾಂಧಿಯವರ ಈ ವರ್ತನೆ ಯಾರಿಗೂ ಸರಿ ಹೊಂದುವುದಿಲ್ಲ ಎಂದು ತಿಳಿಸಿದ್ದಾರೆ.
ಪಶುವೈದ್ಯ ವಿಕಾಸ್ ಶರ್ಮಾ ಅವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಮೇನಕಾ ಗಾಂಧಿ ಅವರು ಬಳಸಿದ ಪದಗಳು ಜಬಲ್ಪುರದ ಪಶು ವೈದ್ಯಕೀಯ ಕಾಲೇಜು ಕೆಟ್ಟದಾಗಿದೆ ಎಂಬುದನ್ನು ಸಾಬೀತುಪಡಿಸುವುದಿಲ್ಲ. ಬದಲಾಗಿ ಅವರು ಎಂತಹ ಕೆಟ್ಟ ಮಹಿಳೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಟ್ವೀಟ್‌ನಲ್ಲಿ ಕಿಡಿಕಾರಿದ್ದಾರೆ.
ಬಿಜೆಪಿ ಸಂಸದೆ ಮತ್ತು ಡಾ.ವಿಕಾಸ್ ಶರ್ಮಾ ನಡುವೆ ನಡೆದ ಸಂಭಾಷಣೆಯ ಆಡಿಯೋ ಕ್ಲಿಪ್ ವೈರಲ್ ಆದ ನಂತರ ಅಜಯ್ ವಿಷ್ಣೋಯಿ ಮೇನಕಾ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.