ಹೈದರಾಬಾದ್: ತೆಲಂಗಾಣ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರ "ಬುಲ್ಡೋಜರ್ ಸರ್ಕಾರ" ಹೇಳಿಕೆಗೆ ಆಲ್ ಇಂಡಿಯಾ ಮಜ್ಲಿಸ್- ಎ- ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶುಕ್ರವಾರ ತಿರುಗೇಟು ನೀಡಿದ್ದಾರೆ.
''ಈ ಬಾರಿಯ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬುಲ್ಡೋಜರ್ ಸರ್ಕಾರ ಬರಲಿದೆ. ಈ ಸರ್ಕಾರವು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಅಪರಾಧ ಕೃತ್ಯಗಳನ್ನು ಮಟ್ಟ ಹಾಕಲಿದೆ'' ಎಂದು ರೆಡ್ಡಿ ಬುಧವಾರ ಹೇಳಿದ್ದರು. "ರಾಜ್ಯದಲ್ಲಿ ಅಕ್ರಮ ವಾಣಿಜ್ಯ ಸಂಕೀರ್ಣಗಳು ಮತ್ತು ಮದುವೆ ಮಂಟಪಗಳನ್ನು ನಿರ್ಮಿಸಲಾಗಿದೆ. ಈ ಜಮೀನು ಬಡ ಮುಸ್ಲಿಮರಿಗೆ ಸೇರಿದೆ. ತೆಲಂಗಾಣದಲ್ಲಿ ಬಿಜೆಪಿಯ ಬುಲ್ಡೋಜರ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿಯೇ ಅಪರಾಧಿಗಳು ಮತ್ತು ರೌಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು'' ಎಂದು ರೆಡ್ಡಿ ಹೈದರಾಬಾದ್‌ನಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ್ದರು.
ಬಿಜೆಪಿ ನಾಯಕ ರೆಡ್ಡಿ ಹೇಳಿಕೆಗೆ ಕಿಡಿ: ಬಿಜೆಪಿ ನಾಯಕ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಓವೈಸಿ, ''ತೆಲಂಗಾಣದಲ್ಲಿ ಬಿಜೆಪಿ ಅಧ್ಯಕ್ಷರು ಹಳೇ ನಗರದಲ್ಲಿನ ನಿವಾಸಗಳನ್ನು ಬುಲ್ಡೋಜರ್‌ಗಳಿಂದ ಕೆಡವುತ್ತೇವೆ ಎಂದು ಹೇಳುತ್ತಾರೆ. ಕಿಶನ್ ರೆಡ್ಡಿ ನೆನಪಿನಲ್ಲಿ ಇಟ್ಟುಕೊಳ್ಳಿ, ನಾವು ಹಾಗೆ ಸುಮ್ಮನೆ ಕುಳಿತಿಲ್ಲ. ನೀವು ಏನು ಬೇಕಾದರೂ ಮಾಡಲು ನಾವೇನು ಕೋಳಿ ಮರಿಗಳು ಅಲ್ಲ'' ಎಂದು ಕಿಡಿಕಾರಿದರು.