ಕ್ಯಾಲಿಕಟ್ (ಕೇರಳ):ಕ್ಯಾಲಿಕಟ್ ಬೀಚ್‌ನಲ್ಲಿ ಕಳೆದ ಭಾನುವಾರ ಸಾವಿರಾರು ಜನರು ಒಟ್ಟು ಸೇರುವ ಮೂಲಕ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. 3 ವರ್ಷದ ಅಂಬೆಗಾಲಿಡುವವರಿಂದ ಹಿಡಿದು 80 ವರ್ಷದವರೆಗಿನ ವೃದ್ಧರೂ ಕೂಡಾ ಒಂದೇ ಪ್ರದೇಶದಲ್ಲಿ ಸೇರಿದ್ದರು. ಆ ಪ್ರದೇಶದಲ್ಲಿ ಒಟ್ಟಾಗಿದ್ದ ಎಲ್ಲರ ಹೆಸರು ಕೂಡಾ ಒಂದೇ ಆಗಿತ್ತು. 14 ಜಿಲ್ಲೆಗಳಿಂದ 2,537 'ಅಶ್ರಫ್' ಎನ್ನುವ ಹೆಸರಿನವರು ಒಂದೆಡೆ ಸೇರಿ ಮಾದಕ ವ್ಯಸನಮುಕ್ತ ಕೇರಳಕ್ಕಾಗಿ ಸಂದೇಶ ಸಾರಿದರು.
ಎಲ್ಲ ಅಶ್ರಫ್ ನಾಮಾಂಕಿತರು ಒಟ್ಟಿಗೆ ನಿಂತು ಕಡಲತೀರದಲ್ಲಿ ತಮ್ಮ ಹೆಸರು ರಚಿಸಿದರು. ಇದು ಯುನಿವರ್ಸಲ್ ರೆಕಾರ್ಡ್ಸ್ ಫೋರಮ್‌ನಲ್ಲಿ (URF) 'ಲಾರ್ಜೆಸ್ಟ್ ಸೇಮ್ ನೇಮ್ ಗ್ಯಾದರಿಂಗ್' ಪಟ್ಟಿ ಸೇರಿದೆ. ಇದಕ್ಕೂ ಮೊದಲು ಬೋಸ್ನಿಯನ್ ಹೆಸರಾದ 'ಕುಬ್ರೊಸ್ಕಿ' 2,325 ಕುಬ್ರೊಸ್ಕಿ ಎನ್ನುವ ಹೆಸರಿನವರು ಭಾಗವಹಿಸಿದ್ದ ದಾಖಲೆ ಇತ್ತು.
ಬಂದರು, ವಸ್ತು ಸಂಗ್ರಹಾಲಯ ಮತ್ತು ಪುರಾತತ್ವ ಸಚಿವ ಅಹಮ್ಮದ್ ದೇವರಕೋವಿಲ್, ಡ್ರಗ್ ಮುಕ್ತ ಕೇರಳ ಎಂಬ ಶೀರ್ಷಿಕೆ ಅಡಿಯಲ್ಲಿ ನಡೆದ ಅಶ್ರಫ್ ಹೆಸರಿನವರ 'ಮಹಾ ಸಂಗಮ'ವನ್ನು ಉದ್ಘಾಟಿಸಿದ್ದರು. "ಜನೋಪಕಾರಿ ಚಟುವಟಿಕೆಗಳನ್ನು ಮಾಡಲು ಅಶ್ರಫ್ ನಾಮಾಕಿಂತರ ಒಗ್ಗೂಡುವಿಕೆ ಒಳ್ಳೆಯ ಸಂಗತಿ. ಏಕತೆ ಮತ್ತು ಶಾಂತಿಯ ಸಂದೇಶಗಳನ್ನು ಅವರು ಹರಡುತ್ತಿದ್ದಾರೆ'' ಎಂದು ಸಚಿವರು ಹೇಳಿದರು. ಅಶ್ರಫ್ ಎಂಬುದು ಅರೇಬಿಕ್ ಹೆಸರು. 'ಅತ್ಯಂತ ಗೌರವಾನ್ವಿತ' ಅಥವಾ 'ತುಂಬಾ ಉದಾತ್ತ' ಎಂಬ ಅರ್ಥ ನೀಡುತ್ತದೆ.
ಅಶ್ರಫ್ ನಾಮಾಂಕಿತರು ಒಟ್ಟು ಸೇರಿದ್ದೇಗೆ?: ಜೂನ್ 2018ರಲ್ಲಿ, ಮಲಪ್ಪುರಂ ಜಿಲ್ಲೆಯ ತಿರುರಂಗಡಿಯ ಕುಟ್ಟಿಯಿಲ್ ಕಾಂಪ್ಲೆಕ್ಸ್‌ನಲ್ಲಿ ಮೊದಲ ಅಶ್ರಫ್ಗಳ ಸಭೆ ನಡೆಯಿತು. ಅದೇ ವರ್ಷದ ಮೇ ತಿಂಗಳಲ್ಲಿ ನಾಲ್ವರು ಅಶ್ರಫ್‌ಗಳು ಕಾಕತಾಳೀಯ ಎಂಬಂತೆ ತಿರುರಂಗಡಿಯಲ್ಲಿ ಒಂದು ಟೀ ಅಂಗಡಿಯಲ್ಲಿ ಒಟ್ಟುಗೂಡಿದ್ದರು. ಟೀ ಅಂಗಡಿಯ ಮಾಲೀಕ ಕೂಡ ಅಶ್ರಫ್. ಚಹಾ ಕುಡಿಯಲು ಬಂದ ವ್ಯಕ್ತಿಯೊಬ್ಬರು "ಅಶ್ರಫ್ ಸಂಗಮವೇ" ಎಂದು ಕೇಳಿದರು. ಈ ಕ್ಷಣದಲ್ಲಿಯೇ ಅಶ್ರಪ್ಗಳ ಗುಂಪನ್ನು ರಚಿಸಲಾಯಿತು. ಬಳಿಕ ಅದನ್ನು ನೂರಕ್ಕೂ ಹೆಚ್ಚು ಸಮಿತಿಗಳಾಗಿ ಪರಿವರ್ತಿಸಲಾಯಿತು. ಪ್ರಸಕ್ತ ವರ್ಷ ಕ್ಯಾಲಿಕಟ್ ಬೀಚ್‌ನಲ್ಲಿ 3,000 ಅಶ್ರಫ್‌ಗಳು ಒಗ್ಗಟ್ಟಾಗಿ ಸೇರಲು ನಿರ್ಧರಿಸಿದ್ದರು. ರಾಜ್ಯವ್ಯಾಪಿ ಪ್ರಚಾರದ ನಂತರ, 2,537 ಅಶ್ರಪ್ಗಳು ಸೇರುವ ಮೂಲಕ ವಿಶ್ವ ದಾಖಲೆಯನ್ನೇ ನಿರ್ಮಿಸಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ 30 ಲಕ್ಷ ಜನರಿಗೆ ಹಿಮನದಿಗಳ ಪ್ರವಾಹದ ಅಪಾಯ.. ಏನಿದು ನಿರ್ಗಲ್ಲು ಸಂಕಷ್ಟ?