ಡೆಹ್ರಾಡೂನ್: ದೇಶದೆಲ್ಲೆಡೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ವೈದ್ಯರು ರೋಗಿಗಳನ್ನು ಕಾಪಾಡಲು ಹರಸಾಹಸಪಡುತ್ತಿದ್ದಾರೆ. ಆದರೆ ಇನ್ನೊಂದೆಡೆ, ಉತ್ತರಾಖಂಡದ ಡೆಹ್ರಾಡೂನ್‌ನ ಕೆಲವು ಆಸ್ಪತ್ರೆಗಳಲ್ಲಿ ಹಣ ಪಡೆದು ಬೆಡ್ ನೀಡುವುದಾಗಿ ಹೇಳಿ ಬಳಿಕ ವಂಚಿಸುತ್ತಿರುವ ಆರೋಪಗಳು ಕೇಳಿಬರುತ್ತಿವೆ.
ಇಲ್ಲಿನ ಕೆಲ ಆಸ್ಪತ್ರೆಗಳ ಸಿಬ್ಬಂದಿ ಜನರಿಂದ ಹಣ ತೆಗೆದುಕೊಂಡು ಬಳಿಕ ರೋಗಿಗಳಿಗೆ ವೆಂಟಿಲೇಟರ್‌ಗಳನ್ನು ಹೊಂದಿದ ಐಸಿಯು ಬೆಡ್ಗಳನ್ನು ವ್ಯವಸ್ಥೆ ಮಾಡುವ ನೆಪದಲ್ಲಿ ಮೋಸ ಮಾಡುದ್ದಾರೆ ಎಂದು ದೂರಲಾಗಿದೆ. ಆಸ್ಪತ್ರೆಯ ಪರವಾಗಿ ದಲ್ಲಾಳಿಗಳು ಸೋಂಕಿತರ ಕುಟುಂಬಸ್ಥರಿಂದ ಹಣ ಪಡೆಯುತ್ತಾರೆ. ಬಳಿಕ ಬೆಡ್ ಬುಕ್ ಆಗಿದೆ ಎಂದು ರೋಗಿಗಳು ಆಸ್ಪತ್ರೆಗೆ ಬಂದಾಗ ಯಾವುದೇ ಬೆಡ್ಗಳು ಸಹ ಬುಕ್ ಆಗಿರುವುದಿಲ್ಲ. ಈ ರೀತಿಯಲ್ಲಿ ಜನರಿಗೆ ಮೋಸ ನಡೆಯುತ್ತಿದೆ ಎನ್ನಲಾಗುತ್ತಿದೆ.
ಅಷ್ಟೇ ಅಲ್ಲ, ಇಲ್ಲಿನ ಪ್ರಖ್ಯಾತ ವ್ಯಕ್ತಿಗಳು ಸೋಂಕಿಗೆ ಗುರಿಯಾದಲ್ಲಿ ಅಥವಾ ಬೆಡ್ ವ್ಯವಸ್ಥೆ ಕೇಳಿದರೆ, ಈ ಹಿಂದೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಡಿಸ್ಚಾರ್ಜ್ ಮಾಡುತ್ತಾರಂತೆ. ಹೆಚ್ಚಿನ ಹಣ ಪಾವತಿಸುವ ಶ್ರೀಮಂತ ವ್ಯಕ್ತಿಗಳು ಬಂದರೂ ಸಹ ಇದೇ ರೀತಿ ಆಸ್ಪತ್ರೆ ಸಿಬ್ಬಂದಿ ವರ್ತಿಸುತ್ತಾರೆ ಎಂದು ಸೋಂಕಿತರು ಹೇಳುತ್ತಾರೆ.
ಈ ಬಗ್ಗೆ ಮಾತನಾಡಿದ ಡೆಹ್ರಾಡೂನ್ ಡಿಜಿಪಿ ಅಶೋಕ್ ಕುಮಾರ್, ಇಂತಹ ಪ್ರಕರಣಗಳ ಬಗ್ಗೆ ನನಗೆ ಮಾಹಿತಿಯಿಲ್ಲ. ದೂರು ಬಂದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಕಾಳಸಂತೆಯನ್ನು ತಡೆಗಟ್ಟಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಯಾರಾದರೂ ಮಾಹಿತಿ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ದೂರುದಾರರ ಗುರುತು ರಹಸ್ಯವಾಗಿಡುತ್ತೇವೆ" ಎಂದು ಕುಮಾರ್ ಹೇಳಿದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಆಶಿಶ್ ಶ್ರೀವಾಸ್ತವ್ ಅವರು ಇಂತಹ ವಿಷಯಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ವಿವಿಧ ಪ್ರದೇಶಗಳ ನೋಡಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಬಳಿಕ ವರದಿಗಳಿಗೆ ಅನುಗುಣವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.