ಮುಂಬೈ:ಡ್ರಗ್ ಪಾರ್ಟಿಯಲ್ಲಿ ಭಾಗಿಯಾದ ಆರೋಪ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಜಾಗೊಂಡಿದೆ. ಹೀಗಾಗಿ ಅವರಿಗೆ ಜೈಲುವಾಸವೇ ಗತಿಯಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಮುಂಬೈನ ಸ್ಥಳೀಯ ಕೋರ್ಟ್ ಈ ಮಹತ್ವದ ಆದೇಶ ಹೊರಹಾಕಿದೆ.
ವಿಚಾರಣೆ ವೇಳೆ 'ನಾನು ಭಾರತೀಯ. ನನ್ನ ಪೋಷಕರು ಭಾರತೀಯರು ಹಾಗೂ ಇಲ್ಲೇ ವಾಸಿಸುತ್ತಿದ್ದೇವೆ. ನನ್ನ ಬಳಿ ಭಾರತದ ಪಾಸ್‌ಪೋರ್ಟ್ ಇದೆ. ಸಂಬಂಧಿತ ಅಧಿಕಾರಿಗಳ ತನಿಖೆಗೆ ಸಹಕಾರ ನೀಡುತ್ತೇನೆ, ನಾನು ದೇಶ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಕೋರ್ಟ್‌ಗೆ ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದರು.
ಜೈಲ್ನ ಕ್ವಾರಂಟೈನ್ ಸೆಲ್ನಲ್ಲಿ ಆರ್ಯನ್
ಆರ್ಯನ್ ಖಾನ್ ಜಾಮೀನು ಅರ್ಜಿ ವಜಾಗೊಂಡಿರುವ ಕಾರಣ, ಇದೀಗ ಅವರನ್ನ ಮುಂಬೈನ ಅರ್ಥರ್ ರೋಡ್ ಜೈಲಿನಲ್ಲಿರಿಸಲು ನಿರ್ಧರಿಸಲಾಗಿದೆ. ಆದರೆ, ಜೈಲಿನ ಮಾರ್ಗಸೂಚಿ ಪ್ರಕಾರ ಕ್ವಾರಂಟೈನ್ ಸೆಲ್ನಲ್ಲಿ ಅವರು ಉಳಿದುಕೊಳ್ಳಲಿದ್ದಾರೆ. ಆರ್ಯನ್ ಜೊತೆ ಉಳಿದ ಆರೋಪಿಗಳು ಮುಂದಿನ 3-4 ದಿನಗಳ ಕಾಲ ಕ್ವಾರಂಟೈನ್ ಸೆಲ್ನಲ್ಲಿ ಇರಲಿದ್ದು, ಅವರನ್ನ ಆರ್ಟಿಪಿಸಿಆರ್ ಪರೀಕ್ಷೆಗೊಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿರಿ:ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ; ಶಾರುಖ್ ಪುತ್ರ ಆರ್ಯನ್ ಖಾನ್‌ಗೆ ಇಲ್ಲ ಜಾಮೀನು
ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನವಾಗಿರುವ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‌ರನ್ನು 14 ದಿನಗಳ ಕಾಲ ಎನ್‌ಸಿಬಿ ವಶಕ್ಕೆ ನೀಡಿ ನಿನ್ನೆಯಷ್ಟೇ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ಮಹತ್ವದ ನಿರ್ಧಾರ ಹೊರಡಿಸಿತ್ತು.