ಪ್ರಯಾಗರಾಜ್ (ಉತ್ತರ ಪ್ರದೇಶ): ವಿವಾಹ ಪ್ರಮಾಣ ಪತ್ರಗಳನ್ನು ನೀಡುತ್ತಿರುವ ಆರ್ಯ ಸಮಾಜ ಸೊಸೈಟಿಗಳ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಲಹಾಬಾದ್ ಹೈಕೋರ್ಟ್, ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಅವರು ಸಾಂಪ್ರದಾಯಿಕ ನಂಬಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ. ಹೇಬಿಯಸ್ ಕಾರ್ಪಸ್ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಾಲಯ, ಆರ್ಯ ಸಮಾಜ ಸಂಘಗಳು ವಿವಾಹಗಳನ್ನು ಸರಿಯಾಗಿ ನಡೆಸದೆ ವಿವಾಹ ಪ್ರಮಾಣಪತ್ರಗಳನ್ನು ನೀಡುತ್ತಿವೆ ಮತ್ತು ಈ ಪ್ರಮಾಣಪತ್ರದ ಆಧಾರದ ಮೇಲೆ ಮದುವೆಯನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಹೇಳಿತು.
ನ್ಯಾಯಮೂರ್ತಿ ಸೌರಭ್ ಶ್ಯಾಮ್ ಶಂಶೇರಿ ಅವರು, ವಿವಿಧ ಆರ್ಯ ಸಮಾಜಗಳು ನೀಡಿದ ವಿವಾಹ ಪ್ರಮಾಣಪತ್ರಗಳ ಪ್ರವಾಹವೇ ನ್ಯಾಯಾಲಯಕ್ಕೆ ಹರಿದು ಬರುತ್ತಿದೆ. ಇವುಗಳ ಸತ್ಯಾಸತ್ಯತೆಯನ್ನು ಈ ನ್ಯಾಯಾಲಯದ ವಿವಿಧ ವಿಚಾರಣೆಗಳಲ್ಲಿ ಮತ್ತು ಇತರ ಹೈಕೋರ್ಟ್‌ಗಳ ವಿಚಾರಣೆಗಳ ಸಂದರ್ಭಗಳಲ್ಲಿ ಗಂಭೀರವಾಗಿ ಪ್ರಶ್ನಿಸಲಾಗಿದೆ. ಸಂಸ್ಥೆಯು ಮದುವೆಗಳನ್ನು ಆಯೋಜಿಸುವಲ್ಲಿ ದಾಖಲೆಗಳ ನೈಜತೆಯನ್ನು ಪರಿಗಣಿಸದೆ ನಂಬಿಕೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿದರು.