ಅಹಮದಾಬಾದ್(ಗುಜರಾತ್):ಮಾಜಿ ಸಂಸದ,ಖ್ಯಾತ ನಟ, ಹಿಂದಿ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ ರಾಮಾಯಣದಲ್ಲಿ ರಾವಣನ ಪಾತ್ರ ನಿರ್ವಹಿಸಿದ್ದ ಅರವಿಂದ ತ್ರಿವೇದಿ (83) ಮಂಗಳವಾರ ರಾತ್ರಿ 11 ಗಂಟೆಗೆ ನಿಧನ ಹೊಂದಿದರು.
ಗುಜರಾತಿ ಸಿನಿಮಾದ ಭೀಷ್ಮ ಎಂದೇ ಪ್ರಖ್ಯಾತರಾಗಿದ್ದ ಅವರು, ಸಬರ್ಕಂಟಾ ಕ್ಷೇತ್ರದ ಸಂಸದರಾಗಿ 1991ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮೃತಪಟ್ಟಿದ್ದಾರೆ.
ಗುಜರಾತಿ ರಂಗಭೂಮಿಯಿಂದ ಆರಂಭವಾದ ಅವರ ವೃತ್ತಿಪರ ಬದುಕು ಸುಮಾರು 300 ಹಿಂದಿ ಮತ್ತು ಗುಜರಾತಿ ಭಾಷೆಗಳಲ್ಲಿ ಅಭಿನಯಿಸುವಂತೆ ಮಾಡಿತ್ತು. ಸುಮಾರು 40 ವರ್ಷಗಳ ಕಾಲ ಸಿನಿಮಾರಂಗಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.
ಗುಜರಾತ್ ಸರ್ಕಾರ ನೀಡುವ ಹಲವಾರು ಪ್ರಶಸ್ತಿಗಳು ಅರವಿಂದ ತ್ರಿವೇದಿ ಅವರ ಸಾಧನೆಗೆ ಸಂದಿವೆ. ತ್ರಿವೇದಿ ಕೊನೆಯುಸಿರೆಳೆದ ಸುದ್ದಿ ತಿಳಿದ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.