ನವದೆಹಲಿ:ತಮ್ಮ ಪಕ್ಷದ ನಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯ ಬಗ್ಗೆ ಕೇಂದ್ರೀಯ ತನಿಖಾ ದಳದಿಂದ ತನಿಖೆಗೆ ಶಿಫಾರಸು ಮಾಡಿದ ಕೆಲವೇ ಗಂಟೆಗಳ ನಂತರ ಕೇಜ್ರಿವಾಲ್ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಬಿಐ ತನಿಖೆಯ ಆದೇಶದ ನಂತರ ತಮ್ಮ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಅಬಕಾರಿ ಖಾತೆ ಹೊಂದಿರುವ ಮನೀಷ್ ಸಿಸೋಡಿಯಾ ಅವರ ರಕ್ಷಣೆಗಾಗಿ ಅರವಿಂದ್ ಕೇಜ್ರಿವಾಲ್ ಪ್ರಯತ್ನ ಆರಂಭಿಸಿದ್ದಾರೆ.
ಸಿಸೋಡಿಯಾ ಜೈಲಿಗಟ್ಟಲು ಕೇಂದ್ರದ ಹುನ್ನಾರ:ಕೇಂದ್ರ ಸರ್ಕಾರವು ಮನೀಷ್ ಸಿಸೋಡಿಯಾರನ್ನು ಜೈಲಿಗಟ್ಟಲು ಬಯಸುತ್ತಿದೆ. ಅವರ ವಿರುದ್ಧ ಹೊರಿಸಲಾದ ಎಲ್ಲ ಆರೋಪಗಳು ನಿರಾಧಾರ. ಪ್ರಥಮ ಬಾರಿಗೆ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಾಗ ಸರ್ಕಾರಿ ಶಾಲೆಗಳ ಸ್ಥಿತಿ ತುಂಬಾ ಶೋಚನೀಯವಾಗಿತ್ತು. ಆದರೆ, ಆಗ ಶಿಕ್ಷಣ ಸಚಿವರಾಗಿದ್ದ ಸಿಸೋಡಿಯಾ ಹಗಲು-ರಾತ್ರಿ ಕೆಲಸ ಮಾಡಿ ಸರ್ಕಾರಿ ಶಾಲೆಗಳ ಶಾಲೆಯನ್ನು ತುಂಬಾ ಸುಧಾರಿಸಿದ್ದರು ಎಂದು ಕೇಜ್ರಿವಾಲ್ ಹೇಳಿದರು.