ನವದೆಹಲಿ :ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದು, ಪ್ರತಿಭಟನೆಯ ವೇಳೆ ಮೃತಪಟ್ಟ 700ಕ್ಕೂ ಹೆಚ್ಚು ರೈತರ ಕುಟುಂಬಗಳಿಗೆ ಪರಿಹಾರ ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತರಿಗಾಗಿ ದೆಹಲಿ ವಿಧಾನಸಭೆ ಶುಕ್ರವಾರ ನಿರ್ಣಯವನ್ನು ಅಂಗೀಕರಿಸಿದೆ.
ವಿವಾದಿತ ಕೃಷಿ ಕಾನೂನುಗಳನ್ನು ರದ್ದುಪಡಿಸಲು ಸದನದಲ್ಲಿ ಮಂಡಿಸಲಾದ ನಿರ್ಣಯದ ಮೇಲಿನ ಚರ್ಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉತ್ತರಿಸಿದರು. 'ರೈತರ ಗೆಲುವು ಪ್ರಜಾಪ್ರಭುತ್ವದ ಗೆಲುವು. ಅವರ ಬಾಕಿ ಇರುವ ಬೇಡಿಕೆಗಳನ್ನು ನಾವು ಬೆಂಬಲಿಸುತ್ತೇವೆ. ನಾವು ಅವರೊಂದಿಗೆ ಇದ್ದೇವೆ' ಎಂದು ಹೇಳಿದರು.
'ಲೋಕಸಭೆಯಲ್ಲಿ ಬಹುಮತದ ದುರಹಂಕಾರದಿಂದ ರೈತ ವಿರೋಧಿ ಕಾನೂನುಗಳು ಅಂಗೀಕರಿಸಲ್ಪಟ್ಟವು. ಆದರೆ, ರೈತರು ಹೋರಾಟದಿಂದ ಯಶಸ್ಸು ಗಳಿಸಿದ್ದಾರೆ. ಅವರಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ.
ದೇಶವಾಸಿಗಳು, ಮಹಿಳೆಯರು, ಯುವಕರು, ವ್ಯಾಪಾರಿಗಳು ರೈತರ ಹೋರಾಟವನ್ನು ಬೆಂಬಲಿಸಿದ್ದಾರೆ. ಈ ಆಂದೋಲನದ ನೇತೃತ್ವ ವಹಿಸಿದ ಪಂಜಾಬ್‌ನ ರೈತರನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ' ಎಂದು ತಿಳಿಸಿದರು.
'ರೈತರು ಕೋವಿಡ್, ಪ್ರತಿಕೂಲ ಹವಾಮಾನ ಮತ್ತು ಡೆಂಘೀ ಅಡೆತಡೆಗಳನ್ನು ಎದುರಿಸಿ ಯಶಸ್ಸು ಸಾಧಿಸಿದ್ದಾರೆ. ಇದು ಅತ್ಯಂತ ಸುದೀರ್ಘವಾದ ಅಹಿಂಸಾತ್ಮಕ ಚಳವಳಿಯಾಗಿದೆ. ಆಡಳಿತ ಪಕ್ಷವು (ಬಿಜೆಪಿ) ಹೋರಾಟವನ್ನು ನಿಲ್ಲಿಸಲು ಷಡ್ಯಂತ್ರವನ್ನು ಮಾಡಿತ್ತು.
ಅಲ್ಲದೇ, ಹೋರಾಟನಿರತ ರೈತರನ್ನು ಭಯೋತ್ಪಾದಕರು, ಖಲಿಸ್ತಾನಿಗಳು, ಚೀನಾ ಮತ್ತು ಪಾಕಿಸ್ತಾನದ ಏಜೆಂಟ್‌ಗಳು ಎಂದು ಕರೆದು ಅವಮಾನಿಸಿತ್ತು.
ಹೋರಾಟದ ವೇಳೆ ಜಲ ಫಿರಂಗಿ ಬಳಸಲಾಯಿತು. ಮೊಳೆಗಳನ್ನು ಬಳಸಲಾಯಿತು. ಆದರೆ, ಅವರು ಎಲ್ಲವನ್ನೂ ಜಯಿಸಿದ್ದಾರೆ. ಈ ಆಂದೋಲನವು ಪ್ರಜಾಪ್ರಭುತ್ವದಲ್ಲಿನ ಜನರ ವಿಶ್ವಾಸವನ್ನು ಹೆಚ್ಚಿಸಿದೆ' ಎಂದು ಅವರು ಹೇಳಿದ್ದಾರೆ.