ನವದೆಹಲಿ :ಇಂಡಿಯಾ (I.N.D.I.A) ಮೈತ್ರಿಕೂಟದ 3ನೇ ಸಭೆ ನಾಳೆ ಮುಂಬೈನಲ್ಲಿ ನಡೆಯಲಿರುವ ಮುನ್ನವೇ ಆಮ್ ಆದ್ಮಿ ಪಕ್ಷದ (ಆಪ್) ವಕ್ತಾರೆ ಪ್ರಿಯಾಂಕಾ ಕಕ್ಕರ್ ತಮ್ಮ ಹೇಳಿಕೆಯ ಮೂಲಕ ಮೈತ್ರಿಕೂಟದ ಹಿರಿಯ ತಲೆಗಳಿಗೆ ಇರಿಸುಮುರುಸು ಉಂಟುಮಾಡಿದ್ದಾರೆ. ತಮ್ಮ ಪಕ್ಷದ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಕಕ್ಕರ್ ಹೇಳಿರುವುದು ಸಂಚಲನ ಮೂಡಿಸಿದೆ.
ಬುಧವಾರ ಎಎನ್ಐ ಜೊತೆ ಮಾತನಾಡಿದ ಕಕ್ಕರ್, "ನೀವು ನನ್ನನ್ನು ಕೇಳಿದರೆ, ಅರವಿಂದ್ ಕೇಜ್ರಿವಾಲ್ ಅವರು (ಪ್ರತಿಪಕ್ಷಗಳ ಮೈತ್ರಿಕೂಟದ) ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ನಾನು ಬಯಸುತ್ತೇನೆ. ಅವರು ಸಾರ್ವಜನಿಕರ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದ್ದಾರೆ. ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಸೂಕ್ತ ಸವಾಲು ಒಡ್ಡಬಲ್ಲವರು" ಎಂದು ಅವರು ಹೇಳಿದರು.
"ಪ್ರಧಾನಿಯವರ ಶೈಕ್ಷಣಿಕ ದಾಖಲೆಗಳು ಅಥವಾ ಅರ್ಹತೆಗಳು ಅಥವಾ ಇನ್ನಾವುದೇ ವಿಷಯವಾಗಿರಲಿ, ಅರವಿಂದ್ ಕೇಜ್ರಿವಾಲ್ ಅವರು ಅಸಂಖ್ಯಾತ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಧೈರ್ಯದಿಂದ ವ್ಯಕ್ತಪಡಿಸುತ್ತಿದ್ದಾರೆ" ಎಂದು ಕಕ್ಕರ್ ತಿಳಿಸಿದ್ದಾರೆ.
ಅಗತ್ಯ ಸರಕುಗಳು ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯ ನಡುವೆಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಣದುಬ್ಬರ ಅತ್ಯಂತ ಕಡಿಮೆಯಾಗಿದೆ. ನಮ್ಮ ಸರ್ಕಾರ ಉಚಿತ ನೀರು, ಉಚಿತ ಶಿಕ್ಷಣ, ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ವೃದ್ಧರಿಗೆ ಉಚಿತ ತೀರ್ಥಯಾತ್ರೆಯನ್ನು ನೀಡುತ್ತಿದೆ. ಅಷ್ಟಾದರೂ ನಾವು ಉಳಿತಾಯ ಬಜೆಟ್ ಮಂಡಿಸಿದ್ದೇವೆ. ಕೇಜ್ರಿವಾಲ್ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯರಿಗೆ ಸವಾಲಾಗಿ ಹೊರಹೊಮ್ಮಿದ್ದಾರೆ ಎನ್ನುವುದು ಎಎಪಿ ವಕ್ತಾರೆಯ ಅಭಿಪ್ರಾಯ.
ಹೊಸದಾಗಿ ರಚನೆಯಾದ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾದ ಮೂರನೇ ಸಭೆಯಲ್ಲಿ ಒಟ್ಟು 26 ರಿಂದ 27 ಪಕ್ಷಗಳು ಭಾಗವಹಿಸುವ ಸಾಧ್ಯತೆಯಿದೆ. ಇಂಡಿಯಾ ಬಣದ ಪಕ್ಷಗಳು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ಜಂಟಿ ಸಭೆ ನಡೆಸಲಿವೆ. ಮುಂಬರುವ ರಾಜ್ಯ ಚುನಾವಣೆಗಳು ಮತ್ತು ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಬಣದ ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಎರಡು ದಿನಗಳ ಸಭೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟದ ಲಾಂಛನವನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ವಿರುದ್ಧ ಕಾಂಗ್ರೆಸ್ ಸೇರಿದಂತೆ ಒಟ್ಟು 26 ಪಕ್ಷಗಳು ಒಗ್ಗೂಡಿವೆ. ಮೈತ್ರಿಕೂಟದ ಉದ್ಘಾಟನಾ ಸಭೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಜೂನ್ 23 ರಂದು ಪಾಟ್ನಾದಲ್ಲಿ ನಡೆದಿತ್ತು. ಗುಂಪಿನ ಎರಡನೇ ಸಭೆ ಜುಲೈ 17-18 ರಂದು ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದ ಬೆಂಗಳೂರಿನಲ್ಲಿ ನಡೆದಿತ್ತು. ಸದ್ಯ ಮೂರನೇ ಸಭೆ ನಾಳೆ ಮತ್ತು ನಾಡಿದ್ದು ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್ನಲ್ಲಿ ನಡೆಯಲಿದೆ. (ಎಎನ್‌ಐ)
ಇದನ್ನೂ ಓದಿ : ಅಮೆರಿಕಕ್ಕೆ ಭಾರತದೊಂದಿಗಿನ ಸಂಬಂಧ ನಿರ್ಣಾಯಕ: ಅಮೆರಿಕ ಕಾಂಗ್ರೆಸ್ ಸದಸ್ಯ ರೋ ಖನ್ನಾ ಪ್ರತಿಪಾದನೆ