ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ದಿನಾಂಕ ಘೋಷಣೆ ಮುಂದೂಡಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ವಾಗ್ದಾಳಿ ನಡೆಸಿದರು. ಸಮಯಕ್ಕನುಸಾರ ಚುನಾವಣೆ ನಡೆಸಿ, ಬಿಜೆಪಿ ಗೆಲುವು ಸಾಧಿಸಿದ್ದೇ ಆದಲ್ಲಿ ಆಮ್ ಆದ್ಮಿ ಪಕ್ಷ ರಾಜಕೀಯ ನಿವೃತ್ತಿ ಪಡೆದುಕೊಳ್ಳಲಿದೆ ಎಂದು ಅವರು ಘೋಷಿಸಿದರು. ಬಿಜೆಪಿಗೆ ಚುನಾವಣೆಯಲ್ಲಿ ಸೋಲುವ ಭಯ ಕಾಡುತ್ತಿದೆ ಎಂದು ಆರೋಪಿಸಿರುವ ಕೇಜ್ರಿವಾಲ್, ಕೇಂದ್ರದ ಆದೇಶದ ಮೇರೆಗೆ ಎಂಸಿಡಿ ಚುನಾವಣೆಗಳಿಗೆ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಲು ಹಿಂದೇಟು ಹಾಕುತ್ತಿದೆ ಎಂದು ಟೀಕಿಸಿದರು.
ಇದನ್ನೂ ಓದಿ:ಧಗ ಧಗನೇ ಹೊತ್ತಿ ಉರಿದ ಕಟ್ಟಡ.. ಅಂಗೈಯಲ್ಲಿ ಪ್ರಾಣ ಹಿಡಿದು ಸಹಾಯಕ್ಕಾಗಿ ಕಾಯುತ್ತಿದ್ದ ಮಹಿಳೆಯ ರಕ್ಷಣೆ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಜ್ರಿವಾಲ್, ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಚುನಾವಣೆ ಮುಂದೂಡುತ್ತಿದೆ. ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ ಎಂದು ಹೇಳಲಾಗ್ತಿದೆ. ಆದರೆ, ದೆಹಲಿ ಮೂಲದ ಸಣ್ಣ ಪಕ್ಷಕ್ಕೆ ಹೆದರುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಚುನಾವಣಾ ಆಯೋಗದ ಮೇಲೆ ಬಿಜೆಪಿ ಒತ್ತಡ ಹಾಕುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದಂತೆ. ಎಂಸಿಡಿ ಎಲೆಕ್ಷನ್ನಲ್ಲಿ ಬಿಜೆಪಿ ಸರ್ವನಾಶವಾಗಲಿದೆ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಚುನಾವಣೆ ದಿನಾಂಕ ಮುಂದೂಡಿಕೆ ಮಾಡುವ ಮೂಲಕ ಬಿಜೆಪಿ ಈಗಾಗಲೇ ಸೋಲೊಪ್ಪಿಕೊಂಡಿದೆ. ಆಮ್ ಆದ್ಮಿ ಪಕ್ಷ 272 ಸೀಟುಗಳ ಪೈಕಿ 250ರಲ್ಲಿ ಗೆಲುವು ದಾಖಲಿಸಲಿದೆ ಎಂದು ಈ ಹಿಂದೆಯೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.