ಕರ್ನಾಟಕ

karnataka

ETV Bharat / bharat

'ಇಂಡಿಯಾ'ದೊಳಗೆ ಕಾಂಗ್ರೆಸ್​- ಆಪ್​ ಕಿತ್ತಾಟ: ಮುಂಬೈ ಸಭೆಯಲ್ಲಿ ಪಕ್ಷ ಭಾಗಿ- ದೆಹಲಿ ಸಿಎಂ ಕೇಜ್ರಿವಾಲ್​

ಮುಂಬೈನಲ್ಲಿ ನಡೆಯುವ 'ಇಂಡಿಯಾ'ದ ಮೂರನೇ ಸಭೆಯಲ್ಲಿ ಭಾಗವಹಿಸುವುದಾಗಿ ಆಪ್​ ಹೇಳಿದೆ. ಛತ್ತೀಸ್​ಗಢ, ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಸಭೆಗಳಲ್ಲಿ ಕಾಂಗ್ರೆಸ್​ ಅನ್ನು ಆಪ್​ ಟೀಕಿಸಿದ್ದು, ಮೈತ್ರಿಯಲ್ಲಿ ಬಿರುಕುಂಟಾಗಿದೆ ಎಂದು ಹೇಳಲಾಗಿತ್ತು.

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​
ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​

By ETV Bharat Karnataka Team

Published : Aug 21, 2023, 8:09 PM IST

ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಪ್ರತಿಪಕ್ಷಗಳು ಕಟ್ಟಿಕೊಂಡಿರುವ ಹೊಸ ಮೈತ್ರಿಕೂಟ 'ಇಂಡಿಯಾ'ದ ಭಾಗವಾಗಿರುವ ಆಮ್​ ಆದ್ಮಿ ಪಕ್ಷ(ಆಪ್​) ಕೂಟದಿಂದ ಹೊರಹೋಗುವ ಬೆದರಿಕೆ ನಡುವೆಯೇ, ಮುಂಬೈನಲ್ಲಿ ನಡೆಯುವ ಮೂರನೇ ಸಭೆಗೆ ಹಾಜರಾಗುವುದಾಗಿ ಇಂದು(ಸೋಮವಾರ) ಘೋಷಿಸಿದೆ.

ದೆಹಲಿ ಸಂಸತ್​ ಸ್ಥಾನಗಳ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್​ ಮತ್ತು ಆಪ್​ ಮಧ್ಯೆ ಒಮ್ಮತ ಮೂಡಿಲ್ಲ. ಏಳೂ ಸ್ಥಾನಗಳಲ್ಲಿ ಕಾಂಗ್ರೆಸ್​ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿತ್ತು. ಇದು ಆಪ್​ ನಾಯಕರನ್ನು ಕೆರಳಿಸಿತ್ತು. ಸೀಟು ಹಂಚಿಕೆ ನಡೆಯದಿದ್ದರೆ ಮೈತ್ರಿಕೂಟ ರಚನೆಯ ಉದ್ದೇಶವೇನು ಎಂದು ಪ್ರಶ್ನಿಸಿ, ಕೂಟದಿಂದ ಹೊರಹೋಗುವುದಾಗಿ ಬೆದರಿಕೆ ಹಾಕಿತ್ತು ಬಳಿಕ ಪಕ್ಷದ ಸಭೆಯಲ್ಲಿ ಅಂತಹ ಯಾವುದೇ ವಿಷಯ ಚರ್ಚಿಸಿಲ್ಲ ಎಂದು ಕಾಂಗ್ರೆಸ್‌ ಸ್ಪಷ್ಟಪಡಿಸಿದ ನಂತರವೇ ಬಿಕ್ಕಟ್ಟು ಶಮನಗೊಂಡಿತ್ತು.

ಜೊತೆಗೆ, ಶೀಘ್ರದಲ್ಲೇ ಮಧ್ಯಪ್ರದೇಶ ಮತ್ತು ಛತ್ತೀಸ್​ಗಢ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದ್ದು, ಇಲ್ಲಿ ಎಲ್ಲ ವಿಪಕ್ಷಗಳು ಪ್ರತ್ಯೇಕವಾಗಿ ಅಖಾಡಕ್ಕಿಳಿದಿವೆ. ಎಲ್ಲ ಪಕ್ಷಗಳು ತಮ್ಮ ತಮ್ಮ ಭರವಸೆಗಳನ್ನು ಜನರ ಮುಂದಿಡುತ್ತಿವೆ. ಅಲ್ಲದೇ, ಒಬ್ಬರ ಮೇಲೊಬ್ಬರು ಟೀಕಾಪ್ರಹಾರ ನಡೆಸುತ್ತಿದ್ದಾರೆ. ಚುನಾವಣಾ ರ್ಯಾಲಿಯಲ್ಲಿ ಆಪ್​ ಬಿಜೆಪಿಯ ಜೊತೆಗೆ ಕಾಂಗ್ರೆಸ್​ ಅನ್ನೂ ಗುರಿಯಾಗಿಸಿ ತೀವ್ರ ವಾಗ್ದಾಳಿ ನಡೆಸುತ್ತಿದೆ. ಇದು ಮೈತ್ರಿಕೂಟದಲ್ಲಿ ಬಿರುಕು ಮೂಡಿದೆಯಾ ಎಂಬ ಅನುಮಾನ ಮೂಡಿಸಿದೆ.

ಈ ಎಲ್ಲಾ ಶಂಕೆಗಳಿಗೆ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಮುಂಬೈನಲ್ಲಿ ತಿಂಗಳಾಂತ್ಯದಲ್ಲಿ ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಮೂರನೇ ಸಭೆಯಲ್ಲಿ ಆಮ್ ಆದ್ಮಿ ಪಕ್ಷವು ಪಾಲ್ಗೊಳ್ಳಲಿದೆ. ನಾವು ಮುಂಬೈಗೆ ಹೋಗುತ್ತೇವೆ. ಮೈತ್ರಿಕೂಟದ ತಂತ್ರಗಳ ಬಗ್ಗೆ ಮುಂದೆ ತಿಳಿಸಲಾಗುವುದು ಎಂದು ಘೋಷಿಸಿದರು.

ಮೈತ್ರಿಕೂಟದ ಮೂರನೇ ಸಭೆ ಮುಂಬೈನಲ್ಲಿ ಆಗಸ್ಟ್​ 31ಕ್ಕೆ ನಿಗದಿ ಮಾಡಲಾಗಿದೆ. ದೆಹಲಿ ಮೇಲೆ ಅಧಿಕಾರ ಸಾಧಿಸುವ ಕುರಿತಾಗಿ ಕೇಂದ್ರ ಸರ್ಕಾರದ ತಂದಿರುವ ಸುಗ್ರೀವಾಜ್ಞೆಗೆ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸಿಲ್ಲ ಎಂಬ ಕಾರಣಕ್ಕಾಗಿ ಬಿಹಾರದಲ್ಲಿ ನಡೆದ ಮೊದಲ ಸಭೆಯಲ್ಲಿ ಆಪ್​ನ ನಾಯಕರು ಕಾಂಗ್ರೆಸ್​ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಕಾಂಗ್ರೆಸ್​ ಸುಗ್ರೀವಾಜ್ಞೆಯನ್ನು ವಿರೋಧಿಸುವುದಾಗಿ ಘೋಷಿಸಿತು. ಬೆಂಗಳೂರಿನಲ್ಲಿ ಜುಲೈ 17-18 ರಂದು ನಡೆದ ಎರಡನೇ ಸಭೆಯಲ್ಲಿ ಎರಡೂ ಪಕ್ಷಗಳು ಭಾಗವಹಿಸಿದ್ದವು.

ಕಾಂಗ್ರೆಸ್​ ಟೀಕಿಸಿದ ಕೇಜ್ರಿವಾಲ್​:ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ಚುನಾವಣಾ ಭಾಷಣಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಬಹಿರಂಗವಾಗಿ ಟೀಕಿಸಿದ್ದಾರೆ. ಇದು ವಿರೋಧಕ್ಕೆ ಕಾರಣವಾಗಿದೆ. ಸಾತ್ನಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಕೇಜ್ರಿವಾಲ್, ರಾಜ್ಯದ ಜನರು ಕಳೆದ 75 ವರ್ಷಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಆದರೆ ಎರಡೂ ಪಕ್ಷಗಳು ಅಭಿವೃದ್ಧಿ ಮಾಡಿಲ್ಲ. ರಾಜ್ಯದಲ್ಲಿ ವಿದ್ಯುತ್ ಬರ ನೀಗಿಲ್ಲ. ನಿಮಗೆ ವಿದ್ಯುತ್ ಪೂರೈಕೆ ಬೇಕಾದರೆ, ಆಪ್​ಗೆ ಮತ ನೀಡಿ. ಎರಡೂ ಪಕ್ಷಗಳನ್ನು ಸೋಲಿಸಿ ಎಂದು ಕರೆ ನೀಡಿದ್ದರು.

ಇದನ್ನೂ ಓದಿ:ಚುನಾವಣೆ ಮುಹೂರ್ತಕ್ಕೂ ಮುನ್ನವೇ ಅಭ್ಯರ್ಥಿಗಳನ್ನು ಘೋಷಿಸಿದ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್​ರಾವ್​!

ABOUT THE AUTHOR

...view details