ನವದೆಹಲಿ: ಪಂಜಾಬ್ ಜನರು ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಶ್ಲಾಘಿಸಿದ್ದಾರೆ.
ಪಂಜಾಬ್ ಚುನಾವಣೆಯಲ್ಲಿ ಪಕ್ಷದ ಗೆಲುವಿನ ನಂತರ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಎಎಪಿಯನ್ನು ಮೂಲೆಗುಂಪು ಮಾಡಲು ಯತ್ನಿಸಿದ ಎಲ್ಲ ಪಕ್ಷಗಳ ನಾಯಕರಿಗೆ ಸಾರ್ವಜನಿಕರು ತಕ್ಕ ಉತ್ತರ ನೀಡಿದ್ದಾರೆ. ಆಮ್ ಆದ್ಮಿಯು ಚುನಾವಣೆಯಲ್ಲಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಸೋಲಿಸಿದೆ ಎಂದು ಹೇಳಿದ್ದಾರೆ.
ಯಾವುದೇ ವಿದ್ಯಾರ್ಥಿಯೂ ಉಕ್ರೇನ್‌ಗೆ ವೈದ್ಯಕೀಯ ಅಧ್ಯಯನಕ್ಕೆ ಹೋಗದಂತಹ ಭಾರತವನ್ನು ನಾವು ಮಾಡುತ್ತೇವೆ. ಈ ಫಲಿತಾಂಶಗಳ ಮೂಲಕ ಜನರು ಕೇಜ್ರಿವಾಲ್ ಭಯೋತ್ಪಾದಕನಲ್ಲ, ನಿಜವಾದ ‘ದೇಶಭಕ್ತ’ ಎಂಬುದನ್ನು ತೋರಿಸಿದ್ದಾರೆ. ನಾವು ಬದಲಾಗದಿದ್ದರೆ ಬ್ರಿಟಿಷರು ನಿರ್ಗಮಿಸಿದ ನಂತರದ ವ್ಯವಸ್ಥೆಯಲ್ಲಿ ಏನೂ ಬದಲಾಗುವುದಿಲ್ಲ ಎಂದು ಒಮ್ಮೆ ಭಗತ್ ಸಿಂಗ್ ಹೇಳಿದ್ದರು. ದುಃಖಕರವೆಂದರೆ ಕಳೆದ 75 ವರ್ಷಗಳಲ್ಲಿ ಈ ಪಕ್ಷಗಳು ಮತ್ತು ನಾಯಕರು ಅದೇ ಬ್ರಿಟಿಷ್ ವ್ಯವಸ್ಥೆಯನ್ನು ಅನುಸರಿಸಿದ್ದರು. ದೇಶವನ್ನು ಲೂಟಿ ಮಾಡುತ್ತಿದ್ದರು. ಶಾಲೆಗಳು/ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಿಲ್ಲ. ಆದರೆ ಎಎಪಿ ವ್ಯವಸ್ಥೆಯನ್ನು ಬದಲಾಯಿಸಿದೆ ಎಂದು ಕೇಜ್ರಿವಾಲ್ ಸಂತಸ ವ್ಯಕ್ತಪಡಿಸಿದರು.