ತೇಜ್‌ಪುರ (ಅರುಣಾಚಲ ಪ್ರದೇಶ):ಅರುಣಾಚಲ ಯುವಕ ಮಿರಾಮ್ ಟ್ಯಾರೋನ್ನನ್ನು ಚೀನಾದ ಪಿಎಲ್‌ಎ ವಶದಿಂದ ಮರಳಿ ಕರೆತರಲಾದ ಬೆನ್ನಲ್ಲೇ ಇದೀಗ ಸಿಯೊಮಿ ಜಿಲ್ಲೆಯ ಮಹಿಳೆಯೊಬ್ಬರು ಏಳು ವರ್ಷಗಳ ಹಿಂದೆ ತನ್ನ ಮಾವನನ್ನು ಕೂಡ ಚೀನಾದ ಸೈನಿಕರು ವಶಕ್ಕೆ ಪಡೆದಿದ್ದರು. ಅಂದಿನಿಂದ ಅವರು ಪತ್ತೆಯಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಅಮೋನಿ ಡಿರೋ ಪುಲೋಮ್ ಎಂಬ ಮಹಿಳೆ, ತನ್ನ ಮಾವ ತಪೋರ್ ಪುಲೋಮ್ ಅವರು ಇಂಡೋ ಚೀನಾ ಗಡಿಯಲ್ಲಿರುವ ತಾಗಿ ಬೋಗು ಪಾಸ್‌ಗೆ ಬೇಟೆಯಾಡಲು ಹೋಗಿದ್ದರು. ಅವರು 2015ರ ಆಗಸ್ಟ್ ಮೊದಲ ವಾರದಿಂದ ಹಿಂತಿರುಗಿಲ್ಲ. ತಪೋರ್ ಪುಲೋಮ್ ತಮ್ಮ ಸ್ನೇಹಿತನೊಂದಿಗೆ ಬೇಟೆಗೆ ಹೋಗಿದ್ದರು. ಅವರ ಸ್ನೇಹಿತ ತಾಕಾ ಯೋರ್ಚಿ ಕೆಲವು ದಿನಗಳ ನಂತರ ಮನೆಗೆ ಹಿಂದಿರುಗಿದ್ದರು, ಆದರೆ ತಪೋರ್ ಪುಲೋಮ್ ಮಾತ್ರ ಅಂದಿನಿಂದ ಹಿಂತಿರುಗಲಿಲ್ಲ ಎಂದು ಅವರು ಹೇಳಿದ್ದಾರೆ.
ಅವರಿಬ್ಬರೂ ಬೇಟೆಯಾಡುತ್ತಿದ್ದಾಗ ಕೆಲವು ಚೀನೀ ಸೈನಿಕರು ಬಂದು ತಪೋರ್ ಪುಲೋಮ್ನನ್ನು ಕರೆದೊಯ್ಯುವುದನ್ನು ತಾನು ಕಣ್ಣಾರೆ ಕಂಡಿದ್ದೇನೆ ಎಂದು ಸ್ನೇಹಿತ ತಾಕಾ ಯೋರ್ಚಿಯು ಪುಲೋಮ್ ಅವರ ಕುಟುಂಬಕ್ಕೆ ತಿಳಿಸಿದ್ದಾರೆ. ಘಟನೆಯಿಂದ ಹೆದರಿದ್ದ ಯೋರ್ಚಿ ಪುಲೋಮ್ ಕುಟುಂಬಕ್ಕೆ ತಪೋರ್ ಬಗ್ಗೆ ತಕ್ಷಣ ಏನನ್ನೂ ಹೇಳಲಿಲ್ಲವಂತೆ. ಆದಾಗ್ಯೂ ನಂತರ ತಾಪೋರ್‌ಗೆ ಏನಾಯಿತು ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದರು ಎಂದು ಮಹಿಳೆ ಅಮೋನಿ ಡಿರೋ ಪುಲೋಮ್ ತಿಳಿಸಿದ್ದಾರೆ.
ನಂತರ ತಪೋರ್‌ನ ಮಗ ಬಿಕಿ ಪುಲೋಮ್ ಮತ್ತು ಸೊಸೆ ಅಮೋನಿ ಡಿರೋ ಪುಲೋಮ್ ಅವರು ತಾಗಿ ಬೋಗು ಪಾಸ್ ಬಳಿಯ ಕಾಡಿಗೆ ಹೋಗಿದ್ದಾರೆ. ಅಲ್ಲಿ ತಪೋರ್ ಕೊಂಡೊಯ್ದಿದ್ದ ಪಾತ್ರೆಗಳು, ಸ್ವಲ್ಪ ಒಣ ಮಾಂಸ, ಅವರ ಜಾಕೆಟ್ ಮತ್ತು ಬೇಟೆಯಾಡುವ ಬಂದೂಕು ಅವರಿಗೆ ಸಿಕ್ಕಿದ್ದವಂತೆ.