ಗಯಾ (ಬಿಹಾರ):ಬಿಹಾರದ ಬೋಧಗಯಾದಲ್ಲಿ ಅರುಣಾಚಲ ಪ್ರದೇಶದ ಮೂಲದ ಪ್ರವಾಸಿ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಅಲ್ಲದೇ, ಕಣ್ಮರೆಯಾದ ಪ್ರವಾಸಿ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ.
ನಾಪತ್ತೆಯಾದ ಮಹಿಳೆಯನ್ನು 32 ವರ್ಷದ ತಾವ್ ಲೋಬ್ಸಾಂಗ್ ತೆಸರಿಂಗ್ ಎಂದು ತಿಳಿದು ಬಂದಿದೆ. ಇವರು ಅರುಣಾಚಲ ಪ್ರದೇಶದ ತಬಾನಿ ಜಿಲ್ಲೆಯ ಜಂಗ್ ಪೊಲೀಸ್ ಠಾಣೆಯ ಮಹೋ ನಿವಾಸಿಯಾಗಿದ್ದಾರೆ. ಪೊಲೀಸರ ಪ್ರಕಾರ, ಜನವರಿ 9ರಂದು ಸಂಜೆ 4 ಗಂಟೆಗೆ ಬೋಧಗಯಾ ದೇವಸ್ಥಾನದ ಬಳಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಆದರೆ, ಬಳಿಕ ಅವರ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಗಯಾ ಎಸ್‌ಎಸ್‌ಪಿ ಆಶಿಶ್ ಭಾರ್ತಿ ಪ್ರತಿಕ್ರಿಯಿಸಿ, ಅರುಣಾಚಲ ಪ್ರದೇಶದ ತಾವ್ ಲೋಬ್ಸಾಂಗ್ ತೆಸರಿಂಗ್ ಬೋಧಗಯಾಕ್ಕೆ ಭೇಟಿ ನೀಡಲು ಬಂದಿದ್ದರು. ದೇವಸ್ಥಾನದ ಬಳಿ ಜನವರಿ 9 ರಿಂದ ಕಾಣ್ಮರೆಯಾಗಿದ್ದಾರೆ. ಈ ಕುರಿತು ಬೋಧಗಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆಕೆಯ ಪತ್ತೆಗಾಗಿ ಹುಡುಕಾಟ ಆರಂಭಿಸಲಾಗಿದೆ. ಕಾಣೆಯಾದ ಮಹಿಳಾ ಪ್ರವಾಸಿ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ನೀಡಲಾಗುವುದು. ಪ್ರವಾಸಿ ಮಹಿಳೆಯ ಸುಳಿವು ಸಿಕ್ಕವರು ಪೊಲೀಸರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.