ಇಟಾನಗರ(ಅರುಣಾಚ ಪ್ರದೇಶ): ಕಳೆದ ಕೆಲ ದಿನಗಳ ಹಿಂದೆ ಚೀನಾದಿಂದ ಅಪಹರಿಸಲ್ಪಟ್ಟಿದ್ದಾನೆ ಎನ್ನಲಾದ ಭಾರತೀಯ ಬಾಲಕನನ್ನು ಚೀನಾ ಸೇನೆ ಇತ್ತೀಚೆಗೆ ಭಾರತೀಯ ಸೇನೆಗೆ ಹಸ್ತಾಂತರ ಮಾಡಿದೆ. ಇದರ ಬೆನ್ನಲ್ಲೇ ಗಂಭೀರವಾದ ಆರೋಪವೊಂದು ಕೇಳಿಬಂದಿದೆ. ಅಪಹರಣಕ್ಕೊಳಗಾಗಿದ್ದ ಬಾಲಕನ ಕಣ್ಣಿಗೆ ಚೀನಾ ಯೋಧರು ಬಟ್ಟೆ ಕಟ್ಟಿ ಥಳಿಸಿದ್ದು, ವಿದ್ಯುತ್ ಶಾಕ್ ನೀಡಿದ್ದಾರೆ ಎಂದು ಆತನ ತಂದೆ ಆರೋಪಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ್ ಜೊತೆ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿರುವ ಮಿರಾಮ್ ತಂದೆ ಅಪಾಂಗ್ ಥಿರೋನ್, 'ಮಿರಾಮ್ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಥಳಿಸಿರುವುದರಿಂದಲೇ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ' ಎಂದು ತಿಳಿಸಿದ್ದಾರೆ.
ಕಳೆದ ತಿಂಗಳ ಜನವರಿ 18ರಂದು ಮಿರಾಮ್ ಎಂಬ ಬಾಲಕ ತನ್ನ ಸ್ನೇಹಿತನೊಂದಿಗೆ ಅರುಣಾಚಲ ಪ್ರದೇಶದ ವಿವಾದಿತ ಗಡಿ ನಿಯಂತ್ರಣ ರೇಖೆ ಬಳಿ ಚಾರಣಕ್ಕಾಗಿ ತೆರಳಿದ್ದ. ಈ ವೇಳೆ ಚೀನಾ ಸೇನೆ ಈತನನ್ನು ಅಪಹರಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದ ಯಾಯಿಂಗ್ ಎಂಬ ಯುವಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ. ಇದರ ಬೆನ್ನಲ್ಲೇ ಉಭಯ ದೇಶಗಳ ವಿದೇಶಾಂಗ ಇಲಾಖೆಗಳ ಮಧ್ಯೆ ಮಾತುಕತೆ ನಡೆದಿತ್ತು. ಆರಂಭದಲ್ಲಿ ತಮಗೆ ಈ ಬಗ್ಗೆ ಗೊತ್ತಿಲ್ಲ ಎಂದು ಚೀನಾ ತಿಳಿಸಿತ್ತು.