ಚೆನ್ನೈ:ತಮಿಳುನಾಡು ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದ್ದ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಾವಿನ ಕುರಿತಾಗಿ ತನಿಖೆ ನಡೆಸಲು ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಎ.ಆರುಮುಘಸ್ವಾಮಿ ನೇತೃತ್ವದ ಸಮಿತಿಯು 5 ವರ್ಷಗಳ ಬಳಿಕ 590 ಪುಟಗಳ ವರದಿಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸರ್ಕಾರಕ್ಕೆ ಇಂದು ಸಲ್ಲಿಸಿದೆ.
ಸಮಿತಿ ನಡೆಸಿದ 5 ವರ್ಷಗಳ ಸುದೀರ್ಘ ತನಿಖೆಯ ವರದಿಯನ್ನು ಸಿಎಂ ಸ್ಟಾಲಿನ್ ಅವರನ್ನು ಭೇಟಿ ಮಾಡಿದ ಆರುಮುಘಸ್ವಾಮಿ ಅವರು ವರದಿಯನ್ನು ಹಸ್ತಾಂತರಿಸಿದರು. ಇದರಲ್ಲಿ ಜಯಲಲಿತಾ ಅವರ ಸಾವಿನ ಕುರಿತಾಗಿ ನಡೆಸಲಾದ ತನಿಖೆಯ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸಮಿತಿಯ ತನಿಖೆಯ ಹಾದಿ:2016 ರ ಸೆಪ್ಟೆಂಬರ್ 22 ರಂದು ಜಯಲಲಿತಾ ಅವರು ತಮಿಳುನಾಡಿನ ಅಪೋಲೋ ಆಸ್ಪತ್ರೆಯಲ್ಲಿ 75 ದಿನಗಳ ಕಾಲ ಚಿಕಿತ್ಸೆಯಲ್ಲಿದ್ದರು. ಈ ವೇಳೆ ಡಿಸೆಂಬರ್ 5, 2016 ರಂದು ಅವರು ಹಠಾತ್ ನಿಧನರಾಗಿದ್ದರು.
ಆಸ್ಪತ್ರೆಯಲ್ಲಿದ್ದಾಗ ಜಯಲಲಿತಾ ಅವರನ್ನು ಭೇಟಿ ಮಾಡಲು ಮತ್ತು ಅವರ ಚಿಕಿತ್ಸೆಯ ಬಗ್ಗೆ ಯಾವುದೇ ಮಾಹಿತಿಗಳು ಹೊರಬಾರದ ಕಾರಣ ಈ ಬಗ್ಗೆ ಅನುಮಾನ ಉಂಟಾಗಿ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಅಂದಿನ ಎಐಎಡಿಎಂಕೆ ಸರ್ಕಾರ ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ ಆರುಮುಘಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆಗೆ ಸೂಚಿಸಿತ್ತು.
ಸಮಿತಿ ನವೆಂಬರ್ 22, 2017 ರಂದು ತನ್ನ ವಿಚಾರಣೆಯನ್ನು ಪ್ರಾರಂಭಿಸಿತ್ತು. ಆಸ್ಪತ್ರೆಗೆ ದಾಖಲಾದ ದಿನದಿಂದ ಜಯಲಲಿತಾ ಅವರಿಗೆ ನೀಡಲಾದ ವೈದ್ಯಕೀಯ ಚಿಕಿತ್ಸೆ ಬಗ್ಗೆ ತನಿಖೆ ನಡೆಸಿತ್ತು. ಈ ಬಗ್ಗೆ ಅಪೋಲೋ ಆಸ್ಪತ್ರೆಗಳು ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಇದರಿಂದ ಆಯೋಗದ ತನಿಖೆಗೆ ತಡೆ ನೀಡಲಾಗಿತ್ತು. 3 ವರ್ಷ ನಿಸ್ತೇಜವಾಗಿದ್ದ ಸಮಿತಿ ಮಾರ್ಚ್ 7, 2022 ರಂದು ಸುಪ್ರೀಂಕೋರ್ಟ್ ತಡೆಯನ್ನು ತೆರವುಗೊಳಿಸಿದ ಬಳಿಕ ವಿಚಾರಣೆಯನ್ನು ಪುನರಾರಂಭಿಸಿತು.
ಸಮಿತಿಗೆ ಸಹಾಯವಾಗಿ ದೆಹಲಿಯ ಏಮ್ಸ್ ವೈದ್ಯಕೀಯ ತಜ್ಞರ ಸಮಿತಿಯನ್ನು ರಚಿಸಲಾಯಿತು. ಮಾಜಿ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ, ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ ಮತ್ತು ಜೆ ಎಳವರಸಿ, ಹಲವು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಸೇರಿದಂತೆ 150 ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳು ಸೇರಿದಂತೆ ವಿಸ್ತೃತ ತನಿಖೆ ನಡೆಸಿದ ಆಯೋಗ ಏಪ್ರಿಲ್ 27, 2022 ರಂದು ವಿಚಾರಣೆಯನ್ನು ಮುಕ್ತಾಯಗೊಳಿಸಿತು.
ಆಗಸ್ಟ್ 20, 2022 ರಂದು ಏಮ್ಸ್ ಸಮಿತಿಯು ಜಯಲಲಿತಾ ಸಾವಿನಲ್ಲಿ ಅಪೋಲೋ ಆಸ್ಪತ್ರೆಯ ಪಾತ್ರವಿಲ್ಲ ಎಂದು ಕ್ಲೀನ್ ಚಿಟ್ ನೀಡಿದೆ. ಆಸ್ಪತ್ರೆಯಲ್ಲಿ ಜಯಲಲಿತಾ ಅವರಿಗೆ ನೀಡಲಾದ ವೈದ್ಯಕೀಯ ಚಿಕಿತ್ಸೆಯು ಪ್ರೋಟೋಕಾಲ್ ಪ್ರಕಾರವೇ ನಡೆದಿದೆ. ಇದರಲ್ಲಿ ದೋಷವಿಲ್ಲ ಎಂದು ತಿಳಿಸಿತ್ತು. ಇದೀಗ ಆ ಸವಿಸ್ತೃತ ವರದಿ ತಮಿಳುನಾಡು ಸರ್ಕಾರದ ಕೈ ಸೇರಿದೆ.
ಓದಿ:ಬಿಲ್ಕಿಸ್ ಬಾನೊ ಪ್ರಕರಣದ ಆರೋಪಿಗಳ ಖುಲಾಸೆ.. ಬೇಸರ ವ್ಯಕ್ತಪಡಿಸಿದ ಜೀವಾವಧಿ ಶಿಕ್ಷೆ ನೀಡಿದ್ದ ಜಡ್ಜ್