ಪಿಥೋರಗಢ(ಉತ್ತರಾಖಂಡ್):ನೇಪಾಳದ ಕಲಗಡ್ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉತ್ತರಾಖಂಡ ರಾಜ್ಯದ ಬೆಟ್ಟದ ಪ್ರದೇಶದಲ್ಲಿ ಭೂಕುಸಿತವಾಗಿದೆ. ಪರಿಣಾಮ, ಅವಶೇಷಗಳು ಕಾಳಿ ನದಿಗೆ ತೇಲಿ ಬಂದಿವೆ. ಇದು ನದಿ ನೀರಿನ ಹರಿಯುವಿಕೆಗೆ ಅಡ್ಡಿಯಾಗಿದ್ದು ಕೃತಕ ಸರೋವರ ಸೃಷ್ಟಿಯಾಗಿದೆ.
ಕಾಳಿ ನದಿಯನ್ನು ಶಾರದಾ ನದಿ ಎಂದೂ ಕರೆಯುತ್ತಾರೆ. ಜೊತೆಗೆ ಮಹಾಕಾಳಿ ನದಿಯು ಪಿಥೋರಗಢ ಜಿಲ್ಲೆಯಲ್ಲಿರುವ 3,600 ಮೀಟರ್ ಎತ್ತರದ ಹಿಮಾಲಯದ ಕಾಲಪಾಣಿಯಲ್ಲಿ ಹುಟ್ಟುತ್ತದೆ. ಈಗ, ರೂಪುಗೊಂಡಿರುವ ಈ ಜಲಮೂಲವು ಧರ್ಚುಲಾ ಮತ್ತು ಜೌಲ್ಜಿಬಿ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಅಪಾಯ ಉಂಟುಮಾಡುತ್ತದೆ. ಸೋಮವಾರ ಸುರಿದ ಭಾರೀ ಮಳೆ ಭಾರತ-ನೇಪಾಳ ಗಡಿ ಪ್ರದೇಶದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.