ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರಕ್ಕೆ ಪಂಜಾಬ್ನಿಂದ ಜನರು ವಲಸೆ ಬರಬಹುದು ಮತ್ತು ಇಲ್ಲಿ ನೆಲೆ ಕಂಡುಕೊಳ್ಳಬಹುದೆಂಬ ಉದ್ದೇಶದಿಂದ 370ನೇ ವಿಧಿಯನ್ನು ಅಂದು ಜಾರಿಗೊಳಿಸಲಾಗಿತ್ತು ಎಂದು ನ್ಯಾಷನಲ್ ಕಾನ್ಫರೆನ್ಸ್ನ ಅಧ್ಯಕ್ಷ, ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮುವಿನಲ್ಲಿ ಸೋಮವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370ಯನ್ನು ನಾವು ಜಾರಿಗೆ ತಂದಿಲ್ಲ. 1947ರಲ್ಲಿ ರಾಜಾ ಹರಿಸಿಂಗ್ ಈ ವಿಧಿಯನ್ನು ಪರಿಚಯಿಸಿ ಜಾರಿಗೆ ತಂದರು. ಈ ವಿಧಿಯನ್ನು ಭಾರತ ವಿಭಜನೆಯ ನಂತರ ಪಂಜಾಬ್ನ ಜನರು ಜಮ್ಮು ಕಾಶ್ಮೀರಕ್ಕೆ ವಲಸೆ ಬರಬಹುದು. ಬಳಿಕ ಇಲ್ಲಿ ನೆಲೆಸಬಹುದೆಂಬ ಉದ್ದೇಶದಿಂದ ಜಾರಿ ಮಾಡಲಾಗಿತ್ತು ಎಂದು ತಿಳಿಸಿದರು.
ಅಲ್ಲದೆ, ಜಮ್ಮು ಕಾಶ್ಮೀರದ ಬಡ ಜನರು ಕಡಿಮೆ ಬೆಲೆಗೆ ತಮ್ಮ ಭೂಮಿಯನ್ನು ಹೊರಗಿನವರಿಗೆ ಮಾರಾಟ ಮಾಡುವ ಸಾಧ್ಯತೆ ಇತ್ತು. ಈ ಸಂಬಂಧ ವಿಭಜನೆ ಬಳಿಕ ರಾಜಾ ಹರಿಸಿಂಗ್ ಜಮ್ಮು ಕಾಶ್ಮೀರದ ಬಡ ಜನರನ್ನು ರಕ್ಷಣೆ ಮಾಡಲು ಆರ್ಟಿಕಲ್ 370 ಜಾರಿಗೊಳಿಸಿದ್ದರು. ಜೊತೆಗೆ ಇಲ್ಲಿನ ಉದ್ಯೋಗವಕಾಶವನ್ನು ಜಮ್ಮು ಕಾಶ್ಮೀರ ಹಾಗೂ ಲಡಾಖ್ನ ಜನರಿಗೆ ಮೀಸಲಿರಿಸಿದ್ದರು. ಇದು ಆರ್ಟಿಕಲ್ 370 ಎಂದು ಫಾರೂಕ್ ಅಬ್ದುಲ್ಲಾ ವಿವರಿಸಿದ್ದಾರೆ.
ಡಿಸೆಂಬರ್ 11ರಂದು ಸುಪ್ರೀಂ ಕೋರ್ಟ್ ಆರ್ಟಿಕಲ್ 370 ಮತ್ತು 35(ಎ) ರದ್ದತಿ ಕುರಿತು ಐತಿಹಾಸಿಕ ತೀರ್ಪು ನೀಡಿತ್ತು. 2019ರ ಆಗಸ್ಟ್ 5ರಂದು ಆರ್ಟಿಕಲ್ 370 ಮತ್ತು35(ಎ) ರದ್ಧತಿ ಕುರಿತು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರವು ಸಾಂವಿಧಾನಿಕ ಏಕೀಕರಣದ ಉದ್ದೇಶದಿಂದ ಮಾಡಲಾಗಿದೆಯೇ ಹೊರತು ದುರುದ್ದೇಶದಿಂದ ಅಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು. ಅಲ್ಲದೆ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತಾತ್ಕಾಲಿಕವಾಗಿದೆ. ಇದು ಕಣಿವೆ ರಾಜ್ಯದಲ್ಲಿ ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಮಾಡಿಕೊಂಡಿದ್ದ ಮಧ್ಯಂತರ ವ್ಯವಸ್ಥೆಯಾಗಿತ್ತು. ಅದನ್ನು ರದ್ದು ಮಾಡಿರುವುದು ತಪ್ಪಲ್ಲ ಎಂದು ತೀರ್ಪಿನಲ್ಲಿ ತಿಳಿಸಿತ್ತು.
ಜಮ್ಮು ಕಾಶ್ಮೀರದ ಆಂತರಿಕ ಸಾರ್ವಭೌಮತ್ವ ಇತರ ದೇಶಕ್ಕಿಂತ ಭಿನ್ನವಾಗಿಲ್ಲ. ದೇಶದ ಎಲ್ಲ ನಿಬಂಧನೆಗಳು ಅಲ್ಲಿಗೂ ಅನ್ವಯಿಸುತ್ತದೆ. ಆರ್ಟಿಕಲ್ 370ನೇ ವಿಧಿ ತಾತ್ಕಾಲಿಕ ವ್ಯವಸ್ಥೆ ಆಗಿರುವುದರಿಂದ ರಾಷ್ಟ್ರಪತಿಗಳಿಗೆ ಅದನ್ನು ಹಿಂಪಡೆಯುವ ಅಧಿಕಾರ ಇದೆ. ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್ನ್ನು ಬೇರ್ಪಡಿಸಿ ಎರಡನ್ನೂ ಕೇಂದ್ರಾಡಳಿತ ಪ್ರದೇಶ ಮಾಡಿರುವ ನಿರ್ಧಾರವು ಸಿಂಧುವಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು. ಜೊತೆಗೆ ಮುಂದಿನ ಸೆಪ್ಟೆಂಬರ್ ಒಳಗೆ ವಿಧಾನಸಭೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ತಿಳಿಸಿತ್ತು.
ಇದನ್ನೂ ಓದಿ :ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವೇ ತಾತ್ಕಾಲಿಕ, ರದ್ದು ಮಾಡಿದ್ದು ತಪ್ಪಲ್ಲ: ಕೇಂದ್ರದ ನಿರ್ಧಾರ ಎತ್ತಿಹಿಡಿದ ಸುಪ್ರೀಂ