ನವದೆಹಲಿ :ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ರದ್ದತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಮುಂದುವರೆಸಿದ ಸುಪ್ರೀಂ ಕೋರ್ಟ್, ಆರ್ಟಿಕಲ್ 35A ವಾಸ್ತವಿಕವಾಗಿ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಹೇಳಿತು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಆರ್ಟಿಕಲ್ 370 ಮತ್ತು 35A ವಿಧಿಗಳನ್ನು ರದ್ದುಗೊಳಿಸಿ 2019ರಲ್ಲಿ ಕೇಂದ್ರ ಸರ್ಕಾರ ಆದೇಶಿಸಿತ್ತು. ಈ ರದ್ಧತಿಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಳೆದ ಕೆಲವು ದಿನಗಳಿಂದ ಈ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದಲ್ಲಿ ನ್ಯಾ.ಎಸ್.ಕೆ.ಕೌಲ್, ನ್ಯಾ.ಸಂಜೀವ್ ಖನ್ನಾ, ನ್ಯಾ.ಬಿ.ಆರ್.ಗವಾಯಿ ಹಾಗು ನ್ಯಾ.ಸೂರ್ಯಕಾಂತ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುತ್ತಿದೆ.
ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ, ನ್ಯಾಯಾಲಯದ ಮುಂದೆ ಆರ್ಟಿಕಲ್ 35Aಯನ್ನು ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳ ವಿಚಾರಣೆ ಬಾಕಿ ಇದೆ ಎಂದು ಹೇಳಿದರು. ದಶಕಗಳಿಂದ ಜನರು ಇಲ್ಲಿ ಒಟ್ಟಿಗೆ ಜೀವನ ನಡೆಸುತ್ತಿದ್ದರೂ, ಹೊರಗಿನ ವ್ಯಕ್ತಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾಗವನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಇಲ್ಲಿ ಯಾವುದೇ ಹೂಡಿಕೆಯೂ ಆಗುತ್ತಿರಲಿಲ್ಲ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಆರ್ಟಿಕಲ್ 35A ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಕ್ಷೇತ್ರಗಳಲ್ಲಿ ವಿನಾಯಿತಿ ನೀಡುತ್ತದೆ. ಇದು ರಾಜ್ಯ ಸರ್ಕಾರದ ಅಡಿಯಲ್ಲಿ ಪಡೆಯುವ ಉದ್ಯೋಗ, ಸ್ಥಿರ ಆಸ್ತಿಗಳ ಖರೀದಿ ಮತ್ತು ರಾಜ್ಯದಲ್ಲಿ ವಾಸಿಸುವ ಬಗ್ಗೆ ಪ್ರತ್ಯೇಕವಾಗಿ ವಿವರಿಸುತ್ತದೆ. ರಾಜ್ಯದಲ್ಲಿ 35A ಜಾರಿಗೊಳಿಸುವುದರಿಂದ ಆರ್ಟಿಕಲ್ 19ನ ಮೂರು ಮೂಲಭೂತ ಹಕ್ಕುಗಳು ಮತ್ತು ಆರ್ಟಿಕಲ್ 16 ಉಲ್ಲಂಘನೆಯಾಗುತ್ತದೆ. ಜನರ ವಾಸ್ತವಿಕ ಮೂಲಭೂತ ಹಕ್ಕುಗಳನ್ನೇ ಕಸಿದುಕೊಳ್ಳುವಂತಾಗುತ್ತದೆ ಎಂದು ಹೇಳಿದರು.