ನವದೆಹಲಿ:ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಚು ಪ್ರಕರಣದಲ್ಲಿ ಮೂರು ದಿನಗಳ ಹಿಂದೆ ಬಂಧಿತರಾದ ಮೂವರು ಶಂಕಿತ ಭಯೋತ್ಪಾದಕರ ಬಗ್ಗೆ ಮಾಹಿತಿ ಹೊರಬಿದ್ದಿದೆ. ಬಂಧಿತರಲ್ಲಿ ಒಬ್ಬನಾದ ಅರ್ಷದ್ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದು, ಈತ ದೆಹಲಿ ಗಲಭೆ ಸಂಚಿನ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ.
ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯ ವೇಳೆ ದೆಹಲಿಯಲ್ಲಿ ನಡೆದ ಗಲಭೆಗಳ ಸಂಚಿನಲ್ಲಿ ಶಂಕಿತ ಉಗ್ರನ ಪ್ರಮುಖ ಪಾತ್ರವಿದ್ದು, 'ತೇರಾ ಮೇರಾ ರಿಶ್ತಾ ಕ್ಯಾ ಹೈ..' ಎಂಬ ಘೋಷಣೆಯನ್ನು ಈ ಅರ್ಷದ್ ನೀಡಿದ್ದ ಎಂಬುವುದಾಗಿ ಮೂಲಗಳು ತಿಳಿಸಿವೆ. ಇದರ ಬಳಿಕ ಆರೋಪಿಯು 2020ರ ದೆಹಲಿ ಗಲಭೆಯೊಂದಿಗೆ ನಂಟು ಹೊಂದಿದ್ದಾನೆ. ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
ಅಲ್ಲದೇ, ಪುಣೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ ಶಹನವಾಜ್‌ಗೆ ಇದೇ ಅರ್ಷದ್ ದೆಹಲಿಯಲ್ಲಿ ಆಶ್ರಯ ನೀಡಿದ್ದ. ಈ ಕುರಿತು ಅರ್ಷದ್‌ನ ವಿಚಾರಣೆಯ ನಂತರವೇ ದೆಹಲಿ ಪೊಲೀಸ್ ವಿಶೇಷ ತಂಡಕ್ಕೆ ಶಹನವಾಜ್ನನ್ನು ಪತ್ತೆಹಚ್ಚಲು ಸಾಧ್ಯವಾಗಿದೆ ಎಂದು ಮೂಲಗಳು ಹೇಳಿವೆ.
ಅಕ್ಟೋಬರ್ 2ರಂದು ದೆಹಲಿ ಪೊಲೀಸ್ ವಿಶೇಷ ತಂಡವು ದೇಶದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಶಂಕಿತರಾದ ರಿಜ್ವಾನ್, ಅರ್ಷದ್, ಉಗ್ರ ಶಹನವಾಜ್ನನ್ನು ಬಂಧಿಸಿದೆ. ಈ ಪೈಕಿ ಶಹನವಾಜ್ ಸುಳಿವು ನೀಡಿದವರಿಗೆ 3 ಲಕ್ಷ ರೂಪಾಯಿ ಬಹುಮಾನವನ್ನೂ ಪ್ರಕಟಿಸಲಾಗಿತ್ತು. ಈ ಮೂವರು ಆರೋಪಿಗಳು 'ಐಸಿಸ್'ನಂತಹ ಭಯೋತ್ಪಾದಕ ಸಂಘಟನೆಯೊಂದಿಗೆ ಸಹ ಸಂಪರ್ಕ ಹೊಂದಿದ್ದಾರೆ. ದೇಶದಲ್ಲಿ ಭಯೋತ್ಪಾದಕ ದಾಳಿಗಳಿಗೆ ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.