ಮಂಡಿ (ಹಿಮಾಚಲ ಪ್ರದೇಶ): ಜಿಲ್ಲೆಯ ಜೋಗಿಂದರ್ ನಗರದ ಟಿಬೇಟಿಯನ್ ಮಠದಲ್ಲಿ ನೇಪಾಳ ದೇಶದ ನಕಲಿ ಗುರುತಿನ ಕಾರ್ಡ್ನೊಂದಿಗೆ ಭಾರತದಲ್ಲಿ ನೆಲೆಸಿದ್ದಕ್ಕೆ ಬಂಧಿತಳಾಗಿದ್ದ ಚೀನಾದ ಮಹಿಳೆಗೆ ನ್ಯಾಯಾಲಯವು ನಾಲ್ಕೂವರೆ ತಿಂಗಳ ಜೈಲು ಶಿಕ್ಷೆ, 2000 ರೂ. ದಂಡ ವಿಧಿಸಿತ್ತು. ಮಾರ್ಚ್ 6 ರಂದು ಶಿಕ್ಷೆ ಮುಗಿಯಲಿದ್ದು, ನಂತರ ಚೀನಾಕ್ಕೆ ಗಡಿ ಪಾರು ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
2022ರ ಸೆಪ್ಟೆಂಬರ್ ತಿಂಗಳಲ್ಲಿ ಮಂಡಿಯ ಜೋಗಿಂದರ್ ನಗರದ ಟಿಬೇಟಿಯನ್ ಮಠದಲ್ಲಿ ನಕಲಿ ದಾಖಲೆಗಳೊಂದಿಗೆ ಸಿಕ್ಕಿಬಿದ್ದ ಚೀನಾ ಮಹಿಳೆಗೆ ನ್ಯಾಯಾಲಯ ವಿಧಿಸಿದ್ದ ನಾಲ್ಕೂವರೆ ತಿಂಗಳ ಜೈಲು ಶಿಕ್ಷೆಯ ಅವಧಿ ಮಾರ್ಚ್ 6 ರಂದು ಪೂರ್ಣಗೊಳ್ಳಲಿದೆ. ಬಳಿಕ ಚೀನಾ ದೇಶಕ್ಕೆ ಗಡಿ ಪಾರು ಮಾಡಲಾಗುವುದು ಎಂದು ಮಂಡಿ ಸಹಾಯಕ ಪೊಲೀಸ್ ಅಧೀಕ್ಷಕ ಸಾಗರ್ ಚಂದ್ರ ತಿಳಿಸಿದ್ದಾರೆ.
40 ವರ್ಷದ ಚೀನಾ ಮಹಿಳೆ ಸೆಪ್ಟೆಂಬರ್ 2022 ರಿಂದ ಟಿಬೇಟಿಯನ್ ಮಠದಲ್ಲಿ ವಾಸಿಸುತ್ತಿದ್ದಳು. ಈ ವೇಳೆ ನಕಲಿ ದಾಖಲೆ ತೋರಿಸಿ ತಾನು ನೇಪಾಳಿ ಮೂಲದವಳು ಎಂದು ಹೇಳಿದ್ದಳು. ಮಹಿಳೆ ಬೌದ್ಧ ಧರ್ಮದ ಬೋಧನೆ ಸ್ವೀಕರಿಸಲು ಇಲ್ಲಿಗೆ ಬಂದಿದ್ದಳು. ಮಹಿಳೆ ನೇಪಾಳಿ ಅಲ್ಲ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಅವಳ ಕೊಠಡಿಯನ್ನೂ ಹುಡುಕಲು ಪೊಲೀಸರು ಆರಂಭಿಸಿದ್ದರು. ಶೋಧದ ವೇಳೆ ಆವಳು ವಾಸವಿದ್ದ ಕೊಠಡಿಯಲ್ಲಿ ಕೆಲವು ಅನುಮಾನಾಸ್ಪದ ದಾಖಲೆಗಳು ಪೊಲೀಸರಿಗೆ ಸಿಕ್ಕವು. ಅದರಲ್ಲಿ ಚೀನಾ ಮತ್ತು ನೇಪಾಳದ ಕೆಲವು ದಾಖಲೆಗಳು ಪತ್ತೆಯಾದವು. ಎರಡೂ ದಾಖಲೆಗಳಲ್ಲಿ ಮಹಿಳೆಯ ವಿವಿಧ ವಯಸ್ಸಿನ ವ್ಯತ್ಯಾಸ ಇರುವುದನ್ನು ದಾಖಲೆಗಳಲ್ಲಿ ಬರೆಯಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.