ಡೆಹ್ರಾಡೂನ್: ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುವ ಯೂಟ್ಯೂಬರ್ ಬಾಬ್ಬಿ ಕಟಾರಿಯಾನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಮದ್ಯದ ಅಮಲಿನಲ್ಲಿ ಡೆಹ್ರಾಡೂನ್ನ ರಸ್ತೆಯೊಂದರಲ್ಲಿ ರಸ್ತೆ ಮಧ್ಯೆ ಕುರ್ಚಿ ಹಾಕಿಕೊಂಡು ಅದರ ಮೇಲೆ ಕುಳಿತು ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಿದ್ದು ಮತ್ತು ಈ ಸಂದರ್ಭದಲ್ಲಿ ಪೊಲೀಸರನ್ನೇ ಬೆದರಿಸಿದ ಆರೋಪಗಳನ್ನು ಈತ ಎದುರಿಸುತ್ತಿದ್ದಾನೆ.
ಈ ಪ್ರಕರಣದಲ್ಲಿ ಈಗ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ಪೊಲೀಸರು ಬಾಬ್ಬಿ ಕಟಾರಿಯಾಗಾಗಿ ಹುಡುಕಾಟ ನಡೆಸಿದ್ದಾರೆ. ಡೆಹ್ರಾಡೂನ್ನ ಕಿಮಾಡಿ ಮಾರ್ಗ್ ಎಂಬಲ್ಲಿ ರಸ್ತೆಯಲ್ಲಿ ಈತ ಸಾರಾಯಿ ಕುಡಿದ ವಿಡಿಯೋ ವೈರಲ್ ಆಗುತ್ತಿದೆ.
ಇತ್ತೀಚೆಗಷ್ಟೇ ಈತನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದ ಹಾಡಿನ ಹಿನ್ನೆಲೆಯಲ್ಲಿ ರೋಡ್ಸ್ ಅಪ್ನೆ ಬಾಪ್ ಕಿ ಎಂಬ ಹಾಡನ್ನು ಪ್ಲೇ ಮಾಡಲಾಗಿದೆ. ಡಿಜಿಪಿ ಅಶೋಕ್ ಕುಮಾರ್ ಅವರು ಕಟಾರಿಯಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್‌ಎಸ್‌ಪಿ ಡೆಹ್ರಾಡೂನ್‌ಗೆ ಆದೇಶಿಸಿದ್ದರು. ಈ ಕುರಿತು ಕ್ಯಾಂಟೊನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.