ನವದೆಹಲಿ: ರಾಷ್ಟ್ರ ರಾಜಧಾನಿಯ ಜಹಾಂಗೀರ್ಪುರಿ ಪ್ರದೇಶದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಮುಂಬರುವ ಗಣರಾಜ್ಯೋತ್ಸವದಂದು ನಡೆಯಬಹುದಾಗಿದ್ದ ಭಯೋತ್ಪಾದಕ ಕೃತ್ಯವನ್ನು ಈ ಮೂಲಕ ವಿಫಲಗೊಳಿಸಿರುವುದಾಗಿ ದೆಹಲಿ ಪೊಲೀಸರ ವಿಶೇಷ ಸೆಲ್ ಹೇಳಿಕೊಂಡಿದೆ. ಈ ಇಬ್ಬರು ಬಂಧಿತ ಶಂಕಿತ ಭಯೋತ್ಪಾದಕರ ಪೈಕಿ ಓರ್ವ ಅರ್ಶದೀಪ್ ಡಲ್ಲಾ ಕೆನಡಾದಲ್ಲಿ ನಡೆಸುತ್ತಿರುವ ಖಲಿಸ್ತಾನಿ ಸಂಘಟನೆಗೆ ನಿಷ್ಠನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮತ್ತೋರ್ವ ಶಂಕಿತ ಉಗ್ರವಾದಿ ಹರ್ಕತ್ ಉಲ್ ಅನ್ಸಾರ್ ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ. ಇವರನ್ನು ಬಂಧಿಸುವ ಮೂಲಕ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಯೋತ್ಪಾದಕರು ಯೋಜಿಸಿದ್ದ ದೊಡ್ಡ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ್ದೇವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಇಬ್ಬರು ಶಂಕಿತ ಉಗ್ರರನ್ನು ಜಗಜೀತ್ ಸಿಂಗ್ ಮತ್ತು ನೌಶಾದ್ ಎಂದು ಗುರುತಿಸಲಾಗಿದೆ. ಜಗಜೀತ್ ಸಿಂಗ್ ಮೂಲತಃ ಉತ್ತರಾಖಂಡದ ಉಧಮ್ ಸಿಂಗ್ ನಗರದವನಾಗಿದ್ದು, ನೌಶಾದ್ ದೆಹಲಿಯ ಜಹಾಂಗೀರ್ ಪುರಿ ಪ್ರದೇಶಕ್ಕೆ ಸೇರಿದವನಾಗಿದ್ದಾನೆ. ಇವರಿಬ್ಬರೂ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಪೊಲೀಸರಿಗೆ ಕಂಡುಬಂದಿದೆ. ಇವರ ಬಳಿಯಿಂದ ಮೂರು ಪಿಸ್ತೂಲ್‌ಗಳು ಮತ್ತು ಇಪ್ಪತ್ತೆರಡು ಜೀವಂತ ಕಾಟ್ರಿಡ್ಜ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ವಿಧ್ವಂಸಕ ಚಟುವಟಿಕೆಗಳ ನೀಲನಕ್ಷೆಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹರ್ಕತ್ ಉಲ್ ಅನ್ಸಾರ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ನೌಶಾದ್ ಎರಡು ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಮತ್ತೊಬ್ಬ ಬಂಧಿತ ವ್ಯಕ್ತಿ ಜಗಜೀತ್ ಖಲಿಸ್ತಾನಿ ಟೈಗರ್ ಫೋರ್ಸ್ (ಕೆಟಿಎಫ್) ನೊಂದಿಗೆ ಸಂಪರ್ಕ ಹೊಂದಿದ್ದಾನೆ. ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ ಅರ್ಶದೀಪ್ ಡಲ್ಲಾ ಈ ಸಂಘಟನೆಯ ನೇತೃತ್ವ ವಹಿಸಿದ್ದಾನೆ.