ಮುಂಬೈ(ಮಹಾರಾಷ್ಟ್ರ):ಡ್ರಗ್ಸ್ ಖರೀದಿಸಲು ದಂಪತಿ ತಮ್ಮ ಎರಡು ವರ್ಷದ ಗಂಡು ಮತ್ತು ನವಜಾತ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಆಘಾತಕಾರಿ ಪ್ರಕರಣ ಅಂಧೇರಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಡಿ.ಎನ್.ನಗರ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಶಬ್ಬೀರ್ ಸಂಶೇರ್ ಖಾನ್, ಸಾನಿಯಾ ಶಬ್ಬೀರ್ ಖಾನ್, ಶಕೀಲ್ ಮಕ್ರಾಣಿ ಬಂಧಿತ ಆರೋಪಿಗಳು. ಈ ಮೂವರು ಸೇರಿದಂತೆ ಉಷಾ ರಾಥೋಡ್ ಎಂಬುವವರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ವಿವರ: ದಂಪತಿ ಶಬ್ಬೀರ್ ಸಂಶೇರ್ ಖಾನ್ ಮತ್ತು ಸಾನಿಯಾ ಶಬ್ಬೀರ್ ಖಾನ್ ಇಬ್ಬರೂ ಶಬ್ಬೀರ್ ಸಂಶೇರ್ ಖಾನ್ನ ಸಹೋದರಿ ನನಂದ್ ಮನೆಯಲ್ಲಿ ವಾಸವಾಗಿದ್ದರು. ದಂಪತಿ ಮಾದಕ ವ್ಯಸನಿಗಳಾಗಿದ್ದು, ನಿತ್ಯ ಮನೆಯಲ್ಲಿ ಜಗಳವಾಡುತ್ತಿದ್ದರು. ಇದರಿಂದ ನನಂದ್ ದಂಪತಿಗೆ ಮನೆ ಬಿಟ್ಟು ಹೋಗುವಂತೆ ಹೇಳಿದ್ದರು. ನಂತರ ದಂಪತಿಗಳಿಬ್ಬರು ಮನೆಯನ್ನು ತೊರೆದು ವರ್ಸೋವಾದ ಮಹೇರಿಯಲ್ಲಿರುವ ಸಾನಿಯಾ ನಿವಾಸಕ್ಕೆ ಹೋಗಿದ್ದರು. ಈ ವೇಳೆ, ದಂಪತಿಗೆ ಹೆಣ್ಣು ಮಗು ಜನಿಸಿತ್ತು. ನನಂದ್ ಅವರ ಪ್ರಕಾರ, ಶಬ್ಬೀರ್ ಮತ್ತು ಸಾನಿಯಾ ಅವರಿಗೆ ನಾಲ್ಕು ವರ್ಷದ ಸುಭಾನ್ ಮತ್ತು ಎರಡು ವರ್ಷದ ಹುಸೇನ್ ಎಂಬ ಇಬ್ಬರು ಮಕ್ಕಳಿದ್ದರು.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಶಬ್ಬೀರ್ ಮತ್ತು ಸಾನಿಯಾ ಅಕ್ಟೋಬರ್ 5 ರಂದು ಬಾಂದ್ರಾದಲ್ಲಿರುವ ನನಂದ್ ಮನೆಗೆ ಮತ್ತೆ ವಾಪಸ್ ಬಂದಿದ್ದರು. ಈ ವೇಳೆ ಹುಸೇನ್ ಹಾಗೂ ನವಜಾತ ಹೆಣ್ಣು ಮಗು ಕಾಣಿಸಿಲ್ಲ. ಈ ಬಗ್ಗೆ ನನಂದ್ ದಂಪತಿ ವಿಚಾರಿಸಿದಾಗ ಡ್ರಗ್ಸ್ ಖರೀದಿಸಲು ಹಣದ ಕೊರತೆ ಇರುವುದರಿಂದ ಸುಮಾರು ಒಂದೂವರೆ ವರ್ಷಗಳ ಹಿಂದೆ ಮಗ ಹುಸೇನ್ ಹಾಗೂ ನವಜಾತ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.