ಭುವನೇಶ್ವರ(ಒಡಿಶಾ):ನಗರದಲ್ಲಿ ಒಡಿಶಾ ಪೊಲೀಸರು ಭರ್ಜರಿ ಭೇಟೆಯಾಡಿ 1.2 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಒಡಿಶಾದ ರಾಜಧಾನಿ ನಗರದಲ್ಲಿ ಪೊಲೀಸರು, ಸಿಬಿಐ ಅಧಿಕಾರಿಯಂತೆ ಸೋಗು ಹಾಕಿ ದರೋಡೆ ಮಾಡಿದ್ದ ಪಂಚ ದರೋಡೆಕೋರರನ್ನು ಬಂಧಿಸಿದ್ದಾರೆ.
ಈ ಕುರಿತು, ಉಪ ಪೊಲೀಸ್ ಆಯುಕ್ತ (ಡಿಸಿಪಿ) ಭುವನೇಶ್ವರ್ ಪ್ರತೀಕ್ ಸಿಂಗ್ ಮಾಹಿತಿ ನೀಡಿದ್ದಾರೆ. ಅವರ ನೀಡಿರುವ ಹೇಳಿಕೆ ಪ್ರಕಾರ, ಆಗಸ್ಟ್ 2 ರಂದು ಭುವನೇಶ್ವರದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಗ್ಯಾಂಗ್ ದರೋಡೆಗೆ ಸಂಬಂಧಿಸಿ ಐವರನ್ನು ಭಾನುವಾರ ಬಂಧಿಸಿದ್ದಾರೆ. ಈ ಐವರು ಆರೋಪಿಗಳು ಸಿಬಿಐ ಏಜೆಂಟರಂತೆ ನಟಿಸಿ ಬಂದೂಕು ತೋರಿಸಿ ಹಣ ದೋಚಿದ್ದರು. ಆರೋಪಿಗಳನ್ನು ಹೇಮಂತ ಕುಮಾರ್ ಧೀರ್ (32), ಸನಾತನ್ ನಹಕ್ ಅಕಾ ಸನಾ (42), ಅರ್ಬಾಜ್ ಖಾನ್ ಅಕಾ ಬಿಟು (22), ಸಂಜಯ ಮಲ್ಲಿಕ್ ಅಕಾ ಕಾಲಿಯಾ (36) ಮತ್ತು ರಾಜಾ ಅಕಾ ಅಜ್ಮೀರ್ ಅಲ್ಲಿ (48) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ದರೋಡೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಪ್ರತೀಕ್ ಸಿಂಗ್, ಆಗಸ್ಟ್ 2 ರಂದು ದೂರುದಾರ ಮತ್ತು ಅವರ ಮಗ ಮನೆಯಲ್ಲಿದ್ದರು, ರಾತ್ರಿ 8 ಗಂಟೆ ಸುಮಾರಿಗೆ ಅಧಿಕಾರಿಗಳಂತೆ ಉಡುಪು ಧರಿಸಿದ್ದ ಐವರು ಮನೆ ಬಾಗಿಲ ಬಳಿ ಬಂದರು. ಬಳಿಕ ಐವರು ಆರೋಪಿಗಳು ತಮ್ಮನ್ನು ಸಿಬಿಐ ಅಧಿಕಾರಿಗಳು ಎಂದು ಗುರುತಿಸಿಕೊಂಡರು. ಮನೆಯೊಳಗೆ ಪ್ರವೇಶಿಸಲು ನಕಲಿ ನ್ಯಾಯಾಲಯದ ಆದೇಶವನ್ನು ಹೊರತೆಗೆದು ತೋರಿಸಿದರು. ಮನೆ ಒಳಗೆ ಬಂದ ತಕ್ಷಣ ಆರೋಪಿಗಳು ತಂದೆ ಮತ್ತು ಮಗನ ಕೈಗಳನ್ನು ಕಟ್ಟಿ ಬಾಯಿಯನ್ನು ಬಿಗಿಗೊಳಿಸಿದರು. ನಂತರ ಮನೆಯಿಂದ ಸುಮಾರು 1.7 ಕೋಟಿ ರೂಪಾಯಿ ನಗದು ಮತ್ತು ಕೆಲವು ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಡಿಸಿಪಿ ಪ್ರತೀಕ್ ಸಿಂಗ್ ತಿಳಿಸಿದ್ದಾರೆ.